ಬೆಂಗಳೂರು : ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಿಹಿಸುದ್ದಿಯೊಂದು ನೀಡಿದ್ದು, ಫೇಲಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ (NIOS) ಮಾದರಿ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯುವುದಕ್ಕೆ ಒಂದು ವರ್ಷ ಕಾಯುವುದನ್ನು ತಪ್ಪಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತಲಾ ಒಂದೂವರೆಯಿಂದ ಎರಡು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮುಂದುವರೆವರೆಸಲು ಅನುಕೂಲವಾಗುವಂತೆ ಮಾಡಲು ಮುಕ್ತ ಶಾಲಾ ಮಾದರಿಯನ್ನು ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.








