ಚಾಮರಾಜನಗರ : ನಿನ್ನೆ ತಾನೆ ಬೆಂಗಳೂರಿನಲ್ಲಿ ಆಸ್ತಿ ವಿಚಾರವಾಗಿ ಮಗನ ತಲೆಗೆ ತಂದೆಯು ಒಬ್ಬರು ಶೂಟ್ ಮಾಡಿದ ಘಟನೆ ವರದಿಯಾಗಿತ್ತು. ಅದರ ಬೆನ್ನಲ್ಲೇ ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ಮೇಕಿಗಳ ವಿಚಾರವಾಗಿ ತಂದೆಯನ್ನು ಗಾಯಗೊಳಿಸಿ ನದಿಗೆ ತಳ್ಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಹೌದು ತಂದೆಯನ್ನು ಸ್ವಂತ ಮಗನೇ ಆಯುಧದಿಂದ ಗಾಯಗೊಳಿಸಿ ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ನಡೆದಿದೆ. ಗೋಪಿನಾಥಂ ಗ್ರಾಮದ ಶಂಕರನ್ (70) ಹತ್ಯೆಯಾದವರು. ಈತನ ಎರಡನೇ ಮಗ ಗೋವಿಂದರಾಜ್ ಆರೋಪಿ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ಶಂಕರನ್ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ಶನಿವಾರ ಸಂಜೆ ಕಾವೇರಿ ನದಿಯಲ್ಲಿ ಶಂಕರನ್ ಮೃತದೇಹ ಪತ್ತೆಯಾಗಿದೆ. ಮೃತನ ಪತ್ನಿ ಪಳನಿಯಮ್ಮ ತಮ್ಮ ಮಗ ಗೊವಿಂದರಾಜು ಅಪ್ಪನನ್ನು ಆಯುಧಗಳಿಂದ ಹೊಡೆದು ಕಾವೇರಿ ನದಿಗೆ ತಳ್ಳಿದ್ದಾನೆ ಎಂದು ದೂರು ಕೊಟ್ಟಿದ್ದರು. ಈ ಹಿನ್ನೆಲೆ ಆತನ ಮಗ ಗೋವಿಂದರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.








