ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.01 ರಿಂದ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವೇತನದಲ್ಲಿ ವಂತಿಕೆಯನ್ನು ನೀಡುವುದು, ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ರೂ.17000 ಗಳಿಂದ ರೂ. 27000 ಸಾವಿರಗಳಿಗೆ ಹೆಚ್ಚಳ ಮಾಡಿದೆ. ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯೂ ಸಹ ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.
ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದೇ ಇರುವ ನೌಕರರು ಲಿಖಿತವಾಗಿ ಅ.18 ರೊಳಗೆ ಸಂಬಂಧಿಸಿದ ಡಿ.ಡಿ.ಓ.ಗಳಿಗೆ ನೀಡುವುದು. ಈ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿ/ನೌಕರರು ಪ್ರತಿ ತಿಂಗಳು ಸರ್ಕಾರ ನಿರ್ದಿಷ್ಟಪಡಿಸಿರುವ ವಂತಿಕೆಯನ್ನು ಅಕ್ಟೋಬರ್-2025ನೇ ಮಾಹೆಯಿಂದ ನೀಡುವುದು.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 5.25 ಲಕ್ಷ ಸರ್ಕಾರಿ ನೌಕರರು ಹಾಗೂ 25 ಲಕ್ಷ ಕುಟುಂಬ ಸದಸ್ಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಯೋಜನೆಗೆ ರಾಜ್ಯ ಸಕಾರದ ಎಲ್ಲಾ ಅಧಿಕಾರಿ/ನೌಕರರು ನೋಂದಣಿ ಮಾಡಿಕೊಳ್ಳಲು ಕ್ರಮವಹಿಸುವುದು.
ಈ ದಾಖಲೆಗಳು ಕಡ್ಡಾಯ
1. ಸರ್ಕಾರಿ ನೌಕರನ ಹಾಗು ಕುಟುಂಬದ ಅರ್ಹ ಸದಸ್ಯರ ಭಾವಚಿತ್ರಗಳು( ಪ್ರತಿಯೊಬ್ಬರ ಭಾವ ಚಿತ್ರವನ್ನು ಪ್ರತ್ಯೇಕವಾಗಿ ನೀಡತಕ್ಕದ್ದು, ಭಾವ ಚಿತ್ರದ ಮೇಲೆ ಸರ್ಕಾರಿ ನೌಕರ ತನ್ನ ಸಹಿ ಮತ್ತು ದಿನಾಂಕವನ್ನು ನಮೂದಿಸುವುದು ಮತ್ತು ಪ್ರತಿ ಐದು ವರ್ಷಗಳಿಗೆ ಒಮ್ಮೆ ಹೊಸ ಭಾವ ಚಿತ್ರವನ್ನು ಒದಗಿಸತಕ್ಕದ್ದು)
2. ಜನ್ಮ ದಿನಾಂಕ ದಾಖಲೆಗಳು,
3. ಆಧಾರ್ ಕಾರ್ಡ್ ಗಳು
4. ವೇತನ ಚೀಟಿ
5. ಕಾನೂನು ದಾಖಲೆಗಳು (ದತ್ತು ವಿವಾಹ ಇತ್ಯಾದಿ ಸಂದರ್ಭಗಳಲ್ಲಿ)









