ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ( National Health Mission-NHM) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿ ಮಾಡಲಾಗಿರಲಿಲ್ಲ. ಇಂತಹ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ವೇತನಕ್ಕಾಗಿ ಅನುದಾನ ಬಿಡುಗಡೆ ಮಾಡಿರೋದಲ್ಲದೇ, ಶೇ.5ರಷ್ಟು ವೇತನವನ್ನು ಹೆಚ್ಚಿಸಿ ಆದೇಶ ಮಾಡಿದೆ.
ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನಾ ನಿರ್ದೇಶಕರು ಆದೇಶಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಜಿಲ್ಲಾ RoP ಯಡಿಯಲ್ಲಿ ಅನುಮೋದನೆಯಾಗಿರುವ ಕಾರ್ಯಕ್ರಮ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯ ವೇತನ ಹಾಗೂ ಪ್ರೋತ್ಸಾಹಧನದ ಅನುದಾನವನ್ನು ಆದ್ಯತೆ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಗಳಿಗೆ K2 SNA SPARSHನಿಂದ ಒಟ್ಟು ರೂ.279,90,62,000 ರೂಪಾಯಿಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಅನುದಾನ ಬಿಡುಗಡೆ ಮಾಡಿದೆ.
ಇನ್ನೂ ಜಿಲ್ಲಾ ಕ್ರಿಯಾ ಯೋಜನೆಯ ಪ್ರತಿ ಲೈನ್ ಐಟಂ ನಲ್ಲಿ ಅನುಮೋದಿಸಿರುವ ಮೊತ್ತಕ್ಕೆ ಮೀರದಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಹಾಗೂ ನಿಗಧಿತ ಉದ್ದೇಶ ಹೊರತು ಪಡಿಸಿ ಬೇರೆ ಉದ್ದೇಶಗಳಿಗೆ ನಿಯಮ ಬಾಹಿರವಾಗಿ ಮಾರ್ಗ ಪಲ್ಲಟ ಮಾಡಿ ಬಳಕೆ ಮಾಡಿದಲ್ಲಿ ಅದಕ್ಕೆ ನೀವೇ ಹೊಣೆಗಾರರೆಂದು ತಿಳಿಸಿದ್ದಾರೆ.



ಶೇ.5ರಷ್ಟು ವೇತನ ಹೆಚ್ಚಳ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ, ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮದಡಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 2024-25 ಮತ್ತು 25-26ನೇ ಸಾಲಿನ ಆರ್ ಓ ಪಿಯಲ್ಲಿ ಶೇ.5ರಷ್ಟು ಹೆಚ್ಚುವರಿ ಮೊತ್ತವು ಅನುಮೋದನೆಯಾಗಿದ್ದು, ಒಂದು ವರ್ಷ ಪೂರೈಸಿದ ಸಿಬ್ಬಂದಿಗಳಿಗೆ ಮಾತ್ರ ಮಾಸಿಕ ಶೇ.5ರಷ್ಟು ಹೆಚ್ಚುವರಿ ವೇತನ ನೀಡುವಂತೆ ಸೂಚಿಸಲಾಗಿದೆ.
KSHCOEA BMS ಸಿಎಂ, ಆರೋಗ್ಯ ಸಚಿವರಿಗೆ ಧನ್ಯವಾದ
ಕಳೆದ ಮೂರು ತಿಂಗಳಿನಿಂದ ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗಿಲ್ಲ. ಶೀಘ್ರವೇ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ( KSHCOEA) ಮನವಿ ಮಾಡಿತ್ತು. ಈ ಮನವಿಗೆ ಪ್ರತಿಸ್ಪಂದಿಸಿರುವಂತ ಸರ್ಕಾರವು ವೇತನಕ್ಕೆ ಅನುದಾನವನ್ನು ಬಿಡುಗಡೆ ಮಾಡಿದೆ. ಹೀಗಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ, ರಾಷ್ಟ್ರೀಯ ಅಭಿಯಾನ ಯೋಜನೆಯ ಅಭಿಯಾನ ನಿರ್ದೇಶಕರಿಗೆ ಧನ್ಯವಾದವನ್ನು ನೌಕರರ ಪರವಾಗಿ ತಿಳಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು









