ಬೆಂಗಳೂರು : ಖಾಸಗಿ ಶಾಲೆ ಸಿಬ್ಬಂದಿ ವಿರುದ್ಧ ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿದ್ದು, ಅನುದಾನಿತ ಖಾಸಗಿ ಶಾಲೆಗಳ ಸಿಬ್ಬಂದಿ ಸರಕಾರಿ ಸಿಬ್ಬಂದಿಯ ಭಾಗವೆಂದು ನ್ಯಾಯಾಲಯ ಹೇಳಿದೆ.
ಆಸ್ತಿ ವಿವರ ಸಲ್ಲಿಸದಿರುವುದು ಮತ್ತು ಅನುಮತಿ ಇಲ್ಲದೆ ಭೂಮಿ ಖರೀದಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ, ಬಿ. ಲಕ್ಷ್ಮಿನಾರಾಯಣ ಅವರ ವಿರುದ್ಧ ತನಿಖೆ ಮುಂದುವರಿಸಲು ಆದೇಶಿಸಿದೆ.
ಲೋಕಾಯುಕ್ತರು ಕೈಗೊಂಡಿದ್ದ ತನಿಖೆ ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬೈರಶೆಟ್ಟಿಹಳ್ಳಿಯ ಶ್ರೀ ಬಾಲಾಂಜನೇಯ ಪ್ರೌಢಶಾಲೆಯ ಗ್ರಂಥಪಾಲಕ ಮತ್ತು ಗುಮಾಸ್ತ ಬಿ. ಲಕ್ಷ್ಮೀನಾರಾಯಣ ಸಲ್ಲಿಸಿದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ವಿಭಾಗೀಯಪೀಠ ವಜಾಗೊಳಿಸಿದೆ.
ಲೋಕಾಯುಕ್ತ ನಿಯಮದಡಿ ವರದಿ ಮತ್ತು ಸಿಸಿಎ ನಿಯಮ 14 ಎ ಅಡಿ ಸರ್ಕಾರ ತನಿಖೆ ನಡೆಸಲು ಹೊರಡಿಸಿರುವ ಆದೇಶ ಸರಿ ಇದೆ ಎಂದು ಹೈಕೋರ್ಟ್ ಹೇಳಿದೆ. ಲೋಕಾಯುಕ್ತರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 12(3) ಪ್ರಕಾರ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಮೇಲ್ನೋಟಕ್ಕೆ ಅರ್ಜಿದಾರರು ಆಸ್ತಿ ವಿವರ ಸಲ್ಲಿಸದಿರುವುದು ದೃಢಪಟ್ಟಿದೆ. ಜೊತೆಗೆ ನಿಯಮದ ಪ್ರಕಾರ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಅರ್ಜಿದಾರರು ಭೂಮಿ ಖರೀದಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆ ಮುಂದುವರಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.