ತುಮಕೂರು : ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲಿ ಮುಂದಿನ ಹಲವು ದಿನಗಳ ಕಾಲ ಭಾರಿ ಮಳ ಆಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಇದೀಗ ತುಮಕೂರು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಇನ್ನೊಂದೆಡೆ, ಹಳ್ಳ-ಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿದು ಹೋಗುತ್ತಿರುವುದರಿಂದ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಬ್ಬಿ, ತಿಪಟೂರು, ತುರುವೇಕೆರೆ ಸೇರಿದಂತೆ ಇತರೆ ಭಾಗದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಕೆರೆಗಳೆಲ್ಲ ಭರ್ತಿಯಾಗಿದ್ದು, ನೀರು ತುಂಬಿ ಹೊರ ಹೊರಹೋಗುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ.
ಇನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಯರೇಕಟ್ಟೆ ಗ್ರಾಮದ ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ವೆಂಕಟೇಶ್ (43), ಇವರ ಮಗಳು ಶ್ರಾವ್ಯ (12) ಮತ್ತು ಶ್ರಾವ್ಯಳ ಸ್ನೇಹಿತೆ ಪುಣ್ಯ (11) ಎಂದು ಗುರುತಿಸಲಾಗಿದೆ. ಶ್ರಾವ್ಯ ಹಾಗೂ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಇಬ್ಬರನ್ನು ಪಾರು ಮಾಡಲು ಹೋದ ವೆಂಕಟೇಶ್ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.