ಬಳ್ಳಾರಿ: ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಳವಾಯಿ ಚಿತ್ತಪ್ಪನವರು ನಿಧನರಾಗಿದ್ದಾರೆ. ಜನಪದ ಮಹಾಕಾವ್ಯಗಳ ಧ್ವನಿಗೆ ದಿಕ್ಕು ತೋರಿಸಿದ ಮಹಾ ಪದಗಾರ ಇನ್ನಿಲ್ಲವಾಗಿದ್ದಾರೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಬಂಡಿ ಗ್ರಾಮದ ದಳವಾಯಿ ಚಿತ್ತಪ್ಪ (90 ವರ್ಷ) ನವರ ಸಿರಿಕಂಠಕ್ಕೆ ತಲೆದೂಗದವರಿಲ್ಲ. ಸಂಡೂರು-ಕೂಡ್ಲಿಗಿ ಪರಿಸರದಲ್ಲಿ ಹಬ್ಬ ಹರಿದಿನಗಳಲ್ಲಿ ಗಣನಾದದೊಂದಿಗೆ ಚಿತ್ತಪ್ಪನ ದನಿ ಕೇಳದಿದ್ದರೆ ಕಾರ್ಯಕ್ರಮ ಅಪೂರ್ಣ ಎಂಬುವುದು ಸುತ್ತಲಿನವರ ಅಭಿಪ್ರಾಯವಾಗಿದೆ. ಶ್ರೀಯುತರು ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಮುದಾಯ ಸಮ್ಮೇಳನಗಳಲ್ಲಿ ಹಾಡಿ ಜನಮನ ಗೆದ್ದಿದ್ದರು.
ದಳವಾಯಿ ಚಿತ್ತಪ್ಪನವರು ತಮ್ಮ ಹದಿನೆಂಟನೇ ವಯಸ್ಸಿಗೆ ಮದುವೆಯಾದರು. ಇವರ ಪತ್ನಿ ಮರಬನಹಳ್ಳಿ ಸಣಮ್ಮ. ಇವರಿಗೆ ಐದು ಜನ ಗಂಡುಮಕ್ಕಳು ಮತ್ತು ಮೂರು ಜನ ಹೆಣ್ಣುಮಕ್ಕಳು . ಸುಮಾರು ಮುವತ್ತೈದು ಮೊಮ್ಮಕ್ಕಳು ಮರಿಮಕ್ಕಳನ್ನು ಕಂಡಿರುವ ದಳವಾಯಿ ಚಿತ್ತಪ್ಪನವರು ಸಂಡೂರು ಭಾಗದ ಗೊಲ್ಲಾಳಿಕೆಯಲ್ಲಿ ಹಿರಿಯ ತಲೆ. ದಳವಾಯಿ ಚಿತ್ತಪ್ಪನವರು ಎತ್ತರದ ಆಳು. ಅವರು ತೊಡುವ ಬಿಳಿ ಬಟ್ಟೆಯಂತೆಯೇ ಬೆಳ್ಳಗಿರುವ ಹುರಿಮೀಸೆ, ಎರೆಡೂ ಮುಂಗೈಯಲ್ಲಿ ಎದ್ದುಕಾಣುವ ಬೆಳ್ಳಿ ಕಡಗ, ಕಿವಿಯಲ್ಲಿ ಮಿಂಚುವ ಕಿವಿಯೋಲೆ, ಕೈಯಲ್ಲಿ ಬಿದುರು ಕೋಲು ಹಿಡಿದು ನಡೆದು ಬರುತ್ತಿದ್ದರೆ ಜಾನಪದ ಶಿಖರವೇ ನಡೆದು ಬರುವಂತೆ ಭಾಸವಾಗುತ್ತಿದ್ದರು.
ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ಆರಾಧನಾ ದೈವಗಳಾದ ಜುಂಜಪ್ಪ, ಎತ್ತಪ್ಪ. ಚಿತ್ತಯ್ಯ ಸಿದ್ದಯ್ಯ, ರಂಗಪ್ಪ, ಗೌರಸಂದ್ರದ ಮಾರಮ್ಮ ಕುರಿತಂತೆ ಸುದೀರ್ಘ ಮಹಾ ಕಾವ್ಯಗಳನ್ನು ಲೀಲಾಜಾಲವಾಗಿ ಗಣೆಯೊಂದಿಗೆ ಹಾಡುವ ಕಲೆ ಕರಗತವಾಗಿತ್ತು. ‘ಚಿತ್ತಯ್ಯ’ನ ಕಾವ್ಯ ಇವರಿಗೆ ಅತ್ಯಂತ ಪ್ರಿಯವಾದದ್ದು. ಚಿತ್ತಯ್ಯ- ಗಂಗಿಮಾಳಿ ಮದುವೆ ಪ್ರಸಂಗವನ್ನು ಮನದುಂಬಿ ಹಾಡುವ ಶ್ರೀಯುತರು ಕಾಡುಗೊಲ್ಲ ಬುಡಕಟ್ಟಿನ ಮದುವೆ ಸಂಬಂದಿತ ಚಪ್ಪರ, ಹಾಲಸ್ತ, ಒಳ್ಳಕ್ಕಿ, ಜಾಡಿ, ಧಾರೆ, ಹಸೆ, ಬೂವ ಮುಂತಾದ ಆಚರಣಾ ವಿಧಾನಗಳನ್ನು ಚಿತ್ತಯ್ಯ- ಗಂಗಿ ಮಾಳವ್ವನ ಮದುವೆಗೆ ಅನ್ವಯಿಸಿ ಹಾಡುವ ಪರಿ ಹಾಗೂ ಸಾಹಿತ್ಯಕ ಪರಿಭಾಷೆ ಯಾವ ಶಿಷ್ಟ ಕವಿಗಳಿಗಿಂತಲೂ ಮಿಗಿಲಾಗಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.
ಇಷ್ಟೇ ಅಲ್ಲದೆ ಇವರು ಹಾಡುವ ಎಲ್ಲಾ ಕಾವ್ಯ ಕಥನಗಳಲ್ಲಿ ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ಸಾಮಾಜಿಕ ಸನ್ನಿವೇಶಗಳು ಅಂತರಗಂಗೆಯಾಗಿ ಪ್ರವಹಿಸುತ್ತಿರುತ್ತವೆ. ಚಿತ್ತಪ್ಪನವರ ಕನ್ನಡ ಭಾಷಾ ಸಂಪತ್ತು ಆಶ್ಚರ್ಯ ಹುಟ್ಟುವಷ್ಟು ಕಾವ್ಯಾತ್ಮಕತೆ ಹಾಗೂ ಧ್ವನಿ ಪೂರ್ಣತೆಯಿಂದ ಕೂಡಿದೆ . ಕಾಡು ಗೊಲ್ಲ ಬುಡಕಟ್ಟಿನ ಪಾರಂಪರಿಕ ಜ್ಞಾನ ಮತ್ತು ಕೌಶಲ ಲಿಪಿಯಲ್ಲಿಲ್ಲ, ಅವುಗಳು ಇರುವುದು ಅವರ ಮೌಖಿಕಥೆಯಲ್ಲಿ . ದಳವಾಯಿ ಚಿತ್ತಪ್ಪನವರು ಈ ಎಲ್ಲಾ ಸಂಗತಿಗಳನ್ನು ತಾನು ಹಾಡುವ ಕಾವ್ಯಗಳಲ್ಲಿ ಸಾಧಿತ ಗೊಳಿಸಿದ್ದರು.
ದಳವಾಯಿ ಚಿತ್ತಪ್ಪ ಇವರ ಪ್ರತಿಭಾ ಸಂಪತ್ತು ಹಾಗು ವ್ಯಕ್ತಿತ್ವವನ್ನು ಕುರಿತಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಮೌಲ್ಯಯುಕ್ತ ಲೇಖನಗಳು ಪ್ರಕಟಗೊಂಡಿವೆ.
ಬೆಂಗಳೂರಿನ ನಾಡೋಜ ಸಿರಿಯಜ್ಜಿ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ಸಿರಿಬೆಳಗು ಪ್ರಶಸ್ತಿಗೆ ಭಾಜನರಾಗಿದ್ದರು. ಇದರೊಂದಿಗೆ ಕರ್ನಾಟಕ ಜಾನಪದ ಅಕಾಡೆಮಿ 2023-24 ನೇ ಸಾಲಿನ ರಾಜ್ಯ ಮಟ್ಟದ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಮುಂದುವರಿಕೆಯಾಗಿ ಕರ್ನಾಟಕ ಜಾನಪದ ಪರಿಷತ್ತು ಲೋಕಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
ದಳವಾಯಿ ಚಿತ್ತಪ್ಪನವರು ಇಂದು (21-10-2025) ನಿಧನರಾಗಿದ್ದಾರೆ. ಇವರ ನಿಧನದಿಂದ ಕನ್ನಡ ಜಾನಪದ ಲೋಕ ಒಬ್ಬ ಹಿರಿಯ ಸಾಂಸ್ಕೃತಿಕ ಕಲಾವಿದನನ್ನು ಕಳೆದುಕೊಂಡಿದೆ. ಇವರ ಜಾನಪದ ಕಾವ್ಯ ಕಥನಗಳು ಎಂದಿಗೂ ಜನಮನದಲ್ಲಿ ಅಚ್ಚಳಿಯದೆ ನೆಲೆಸಿರುತ್ತವೆ ಎಂಬುದಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳುವ ಮೂಲಕ, ಅವರ ನಿಧನಕ್ಕೆ ಅಕಾಡೆಮಿಯ ಪರವಾಗಿ ಸಂತಾಪ ಸೂಚಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
BREAKING: ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಪಂದ್ಯಗಳಿಗೆ ಭಾರತ ತಂಡ ಪ್ರಕಟ: ರಿಷಭ್ ಪಂತ್ ನಾಯಕ ನೇಮಕ | Rishabh Pant
ಹಾಸನಾಂಬೆ ದರ್ಶನದ ಬಗ್ಗೆ ಈ ಮಹತ್ವದ ಅಪ್ ಡೇಟ್ ಕೊಟ್ಟ ಸಚಿವ ಕೃಷ್ಣಬೈರೇಗೌಡ








