ಬೆಂಗಳೂರು : ಶಿಕ್ಷಣ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮ-2017ಕ್ಕೆ ತಿದ್ದುಪಡಿ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರಿಗೂ (ಪಿಎಸ್‌ಟಿ) 6 ಮತ್ತು 7ನೇ ತರಗತಿ ಮಕ್ಕಳಿಗೂ ಪಾಠ ಮಾಡಲು ಅವಕಾಶ ಕಲ್ಪಿಸಿ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ಕಲ್ಪಿಸಿದೆ.
2017ರಲ್ಲಿ ಶಿಕ್ಷಕರ ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ತಂದು 2016ಕ್ಕಿಂತ ಮೊದಲು 1ರಿಂದ 7 ಹಾಗೂ 1ರಿಂದ 8ನೇ ತರಗತಿ ಪಾಠ ಮಾಡಲು ನೇಮಕವಾಗಿದ್ದ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರನ್ನೂ 1ರಿಂದ 5ನೇ ತರಗತಿ ಮಾತ್ರ ಪಾಠ ಮಾಡಬೇಕೆಂದು ಸೀಮಿತಗೊಳಿಸಾಗಿತ್ತು. ಇದರಿಂದ ಹಲವಾರು ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು, ಇತ್ತೀಚಿಗೆ ಬಂದ ಪದವೀಧರ ಶಿಕ್ಷಕರ ಕೈ ಕೆಳಗೆ ಸಲ್ಲಿಸುವಂತಾಗಿತ್ತು.
ಅಲ್ಲದೆ, ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಹುದ್ದೆ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗಳ ಬಡ್ತಿಯಲ್ಲೂ ಪದವೀಧರ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಹುದ್ದೆಗಳ ಮರುವಿಂಗಡಣೆಯಲ್ಲೂ ಪದವೀಧರ ಶಿಕ್ಷಕರಿಗೆ ಆದ್ಯತೆ ನೀಡಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹುದ್ದೆಗಳ ಕೊರತೆ ಎದುರಾಗಿತ್ತು. ಇದರಿಂದ 2016ಕ್ಕೆ ಮೊದಲು ನೇಮಕಗೊಂಡ ಶಿಕ್ಷಕರಿಗೆ ಅನ್ಯಾ ಯದ ಕೂಗು ಕೇಳಿಬಂದಿತ್ತು. ಅನ್ಯಾಯ ಖಂಡಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 2017ರಿಂದಲೂ ಹೋರಾಟ ನಡೆಸುತ್ತಾ ಬಂದಿತ್ತು. ಈಗ ನಿಯಮಗಳಿಗೆ ಮತ್ತೆ ತಿದ್ದುಪಡಿ ತಂದು ಹೊಸ ಅಧಿಸೂಚನೆ ಈ ಅನ್ಯಾಯ ಸರಿಪಡಿಸುವ ಕೆಲಸ ಸರ್ಕಾರ ಮಾಡುತ್ತಿದೆ.