ಬೆಂಗಳೂರು : ಬೆಂಗಳೂರಿನಲ್ಲಿ ಓಲಾ ಕಂಪನಿಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಂಪನಿಯ ಸಿಇಒ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಅರವಿಂದ್ ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭತ್ಯೆ, ವೇತನ ನೀಡದೇ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಓಲಾ ಸಂಸ್ಥೆ ಸಿಇಒ ಭವೇಶ್ ಅಗರ್ವಾಲ್ ಮತ್ತು ಹಿರಿಯ ಸಿಬ್ಬಂದಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 28ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಅರವಿಂದ್ ಅಕೌಂಟ್ ಗೆ 17 ಲಕ್ಷ 46 ಸಾವಿರ ಹಣ ವರ್ಗಾವಣೆ ಮಾಡಲಾಗಿತ್ತು. ಅನುಮಾನದಿಂದ ಕಂಪನಿಯನ್ನು ಕುಟುಂಬ ಪ್ರಶ್ನಿಸಿತ್ತು. ಕಂಪನಿಯ ಹೆಚ್.ಆರ್. ಮತ್ತು ಸಿಬ್ಬಂದಿಯಿಂದ ಅಸ್ಪಷ್ಟ ಮಾಹಿತಿ ಸಿಕ್ಕಿದೆ. ಬಳಿಕ ಅರವಿಂದ್ ರೂಮಿನಲ್ಲಿ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.