ನವದೆಹಲಿ: ಭಾರತದ ಎಲ್ಲಾ ಆಸ್ಪತ್ರೆಗಳು ಸಂಭಾವ್ಯ ಅಂಗಾಂಗ ಮತ್ತು ಅಂಗಾಂಶ ದಾನಿಗಳ ಕುಟುಂಬಗಳಿಗೆ ಸಲಹೆ ನೀಡಲು ಮೀಸಲಾದ ತಂಡಗಳನ್ನು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ನೀಡಿದ ಸಂವಹನದಲ್ಲಿ ತಿಳಿಸಿದೆ.
ಎಲ್ಲಾ ಸಾವುಗಳನ್ನು ವರದಿ ಮಾಡಲು, ಕುಟುಂಬ ಸದಸ್ಯರ ಸಮಯೋಚಿತ ಸಮಾಲೋಚನೆಗಾಗಿ ಪ್ರಯತ್ನಿಸಲು ಮತ್ತು ಅಂಗಾಂಗ ಮತ್ತು ಅಂಗಾಂಶ ದಾನಕ್ಕೆ ಅವರನ್ನು ಪ್ರೋತ್ಸಾಹಿಸಲು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಮಾನವ ಅಂಗಾಂಗ ಮತ್ತು ಅಂಗಾಂಶ ಕಸಿಯ ಅಗತ್ಯವಿರುವ ರೋಗಿಗಳ ಸಂಖ್ಯೆ ಮತ್ತು ದಾನಿಗಳ ಲಭ್ಯತೆಯ ನಡುವೆ ಭಾರತವು ದೊಡ್ಡ ಅಂತರವನ್ನು ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
“ಆಸ್ಪತ್ರೆಗಳು ಮೆದುಳಿನ ಸ್ಟೆಮ್ ಡೆತ್ ಸಮಿತಿಯ ಸದಸ್ಯರು ಮತ್ತು ಕಸಿ ಸಂಯೋಜಕ / ಸಲಹೆಗಾರರನ್ನು ಒಳಗೊಳ್ಳುವ ಮೂಲಕ ಅಂಗಾಂಗ ಮತ್ತು ಅಂಗಾಂಶ ದಾನ ತಂಡಗಳನ್ನು ರಚಿಸುವುದು ಅತ್ಯಗತ್ಯ” ಎಂದು ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಎನ್ಒಟಿಟಿಒ) ಎಲ್ಲಾ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಎನ್ಒಟಿಟಿಒ ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಮಟ್ಟದ ಒಗನೈಸೇಶನ್ ಆಗಿದೆ. ಆಸ್ಪತ್ರೆಗಳಲ್ಲಿ ಸಂಭವಿಸುವ ಎಲ್ಲಾ ಸಾವುಗಳ ಬಗ್ಗೆ ಅಂಗಾಂಗ ಮತ್ತು ಅಂಗಾಂಶ ದಾನ ತಂಡಕ್ಕೆ ಕಡ್ಡಾಯವಾಗಿ ತಿಳಿಸಬೇಕು ಎಂದು ನೋಟ್ಟೊ ನಿರ್ದೇಶಕ ಡಾ.ಅನಿಲ್ ಕುಮಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. “ಕುಟುಂಬವು ಅಂಗಾಂಗ ದಾನಕ್ಕೆ ಒಪ್ಪದಿದ್ದರೂ, ಅಂಗಾಂಶ ದಾನದ ಆಯ್ಕೆಯನ್ನು ಕುಟುಂಬಕ್ಕೆ ನೀಡಬೇಕು” ಎಂದು ಡಾ.ಕುಮಾರ್ ಅಕ್ಟೋಬರ್ 17 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.