ಬೆಂಗಳೂರು : ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತ್ನಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಬಳಿಕ ಕೃತ್ಯ ಮರೆ ಮಾಚಲು ವಾಟರ್ ಹೀಟರ್ನಿಂದ ಕರೆಂಟ್ ಹೊಡೆದು ಮೃತಪಟ್ಟಿರುವುದಾಗಿ ಕಥೆ ಕಟ್ಟಿದ ಪತಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಹತ್ಯೆಗೊಳಗಾದ ರೇಷ್ಮಾ (32). ಹತ್ಯೆ ಮಾಡಿದ ಆರೋಪದಡಿ ಪತಿ ಪ್ರಶಾಂತ್ ಕಮ್ಮಾರ್ (25) ಎಂಬಾತನನ್ನು ಬಂಧಿಸಲಾಗಿದೆ. ರೇಷ್ಮಾ ಸಹೋದರಿ ರೇಣುಕಾ ಎಂಬುವರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ಧಾರೆ.
5 ವರ್ಷಗಳ ಹಿಂದೆ ಅನಾರೋಗ್ಯ ಕಾರಣಕ್ಕೆ ಪತಿ ಮೃತಪಟ್ಟ ಬಳಿಕ ಕಲುಬರಗಿ ಜಿಲ್ಲೆಯ ರೇಷ್ಮಾ, ತನ್ನ ಮಗಳ ಜತೆ ನಗರಕ್ಕೆ ಬಂದು ನೆಲೆಸಿದ್ದಳು. ಹೆಬ್ಬಗೋಡಿ ಸಮೀಪದ ಮರಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಮನೆಯಲ್ಲಿ ಕೆಲಸ ಮಾಡಿಕೊಂಡು ಆಕೆ ಜೀವನ ಸಾಗಿಸುತ್ತಿದ್ದಳು. ಹೀಗಿರುವಾಗ ಎರಡು ವರ್ಷಗಳ ಹಿಂದೆ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ವಿಜಯನಗರ ಜಿಲ್ಲೆ ಹೂವಿಡಗಲಿ ತಾಲೂಕಿನ ಎಲೆಕ್ಟ್ರಿಶಿಯನ್ ಪ್ರಶಾಂತ್ ಪರಿಚಯವಾಗಿದೆ. ಕ್ರಮೇಣ ಪ್ರೀತಿಗೆ ತಿರುಗಿದೆ.
9 ತಿಂಗಳ ಹಿಂದೆ ರೇಷ್ಮಾಗೆ ಇನ್ಸ್ಟಾಗ್ರಾಮ್ ಮುಖಾಂತರ ಬಳ್ಳಾರಿಯ ಹೂವಿನ ಹಡಗಲಿ ಮೂಲದ ಪ್ರಶಾಂತ್ ಎಂಬಾತನ ಪರಿಚಯವಾಗಿದೆ. ಕಾಲಕ್ರಮೇಣ ಪ್ರೀತಿಗೆ ತಿರುಗಿ ಇಬ್ಬರು ಮದುವೆ ಮಾಡಿಕೊಂಡಿದ್ದರು. ಐಟಿಐ ವ್ಯಾಸಂಗ ಮಾಡಿದ್ದ ಪ್ರಶಾಂತ್ ಹೆಬ್ಬಗೋಡಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ತನ್ನ ಪತ್ನಿ ನಡವಳಿಕೆ ಮೇಲೆ ಆತನಿಗೆ ಅನುಮಾನ ಶುರುವಾಯಿತು. ಪರ ಪುರುಷನ ಸಹವಾಸದಲ್ಲಿ ಪತ್ನಿ ಇದ್ದಾಳೆ ಎಂಬ ಶಂಕೆ ಇತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ್ಗೆ ಸತಿ-ಪತಿ ಮಧ್ಯೆ ಜಗಳವಾಗುತ್ತಿದ್ದವು. ಅಂತೆಯೇ ಅ.18 ರಂದು ಬೆಳಗ್ಗೆ ಸಹ ಪ್ರಶಾಂತ್ ಹಾಗೂ ರೇಷ್ಮಾ ಮಧ್ಯೆ ಗಲಾಟೆಯಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ರೇಷ್ಮಾಳ ಕಪಾಳಕ್ಕೆ ಬಿಗಿದಿದ್ದಾನೆ. ಈ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಆಕೆಯನ್ನು ಕತ್ತು ಹಿಸುಕಿ ಆರೋಪಿ ಕೊಂದಿದ್ದಾನೆ.