ಉಡುಪಿ : ಉಡುಪಿಯಲ್ಲಿ ಘೋರವಾದ ದುರಂತ ನಡೆದಿದ್ದು, ಯುವಪ್ರೇಮಿಗಳಿಬ್ಬರು ಯಾರು ಇಲ್ಲದ ವೇಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿಯಲ್ಲಿ ಗುರುವಾರ ಸಂಜೆ ನಡೆದಿದೆ. ಉಡುಪಿ ನಗರದ ಅಂಬಲಪಾಡಿ ಕಾಳಿಕಾಂಬನಗರದ ಲೇಬರ್ ಕಾಲೋನಿ ಎಂಬಲ್ಲಿ ಈ ಘಟನೆ ನಡೆದಿದೆ.
ಲೇಬರ್ ಕಾಲೋನಿಯ ಬಾಲಕಿ ವಾಸವಾಗಿರುವ ಬಾಡಿಗೆ ಜೋಪಡಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ. ಮೃತ ಬಾಲಕಿ ವಲಸೆ ಕಾರ್ಮಿಕ ಕುಟುಂಬದ ಕಾಲೇಜು ವಿದ್ಯಾರ್ಥಿನಿ, ಯುವಕ ವಲಸೆ ಕಾರ್ಮಿಕ ಮಲ್ಲೇಶ (23) ಹಾಗು ಬಾಲಕಿ ಪವಿತ್ರಾ (17) ಎಂದು ತಿಳಿದುಬಂದಿದೆ.
ನಗರ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಎರಡು ಮೃತದೇಹಗಳನ್ನು ತೆರವುಗೊಳಿಸಿ ಆ್ಯಂಬುಲೆನ್ಸ್ ವಾಹನದಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ಪೊಲೀಸ್ ಇಲಾಖೆಗೆ ನೆರವು ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.