ಬೆಂಗಳೂರು : ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಬಂಧ ವರದಿ ತರಿಸಿಕೊಂಡು, ಅಂಥವರನ್ನು ಅಮಾನತು ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರ್ಕಾರಿ ನೌಕರರು ಕೆಲಸ ಮಾಡುತ್ತಾರೆ ಅಂದುಕೊಂಡಿದ್ದೇವೆ. ಆದರೆ, ಅವರು ನಮಗಿಂತಲೂ ಹೆಚ್ಚು ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದಲ್ಲದೆ, ಬೇರೆ ರೀತಿಯಲ್ಲೂ ಪಾಲ್ಗೊಂಡಿದ್ದಾರೆ. ಇದರಲ್ಲಿ ನಮ್ಮ ಇಲಾಖೆಯ ಕೆಲವರಿದ್ದಾರೆ. ಈ ಸಂಬಂಧ ವರದಿ ತರಿಸಿಕೊಳ್ಳುತ್ತಿದ್ದು, ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಈ ಹಿಂದೆ 2013ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಶಾಲೆಗಳು, ಶಾಲೆಗಳ ಆವರಣಗಳು ಯಾವುದೇ ಖಾಸಗಿ ಸಂಸ್ಥೆಗಳ ಕಾರ್ಯಕ್ರಮಗಳಿಂದ ಮುಕ್ತವಾಗಿರಬೇಕು, ಶಾಲೆಗಳು ಶಿಕ್ಷಣೇತರ ಚಟುವಟಿಕೆಗಳಿಂದ ಮುಕ್ತವಾಗಿರಬೇಕು. ಶಾಲೆಗಳ ಆವರಣವು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿರಬೇಕು ಎಂದು ತನ್ನದೇ ಸರ್ಕಾರ ಹೊರಡಿಸಿದ ಆದೇಶ, ತಾವೇ ರೂಪಿಸಿದ ನಿಯಮಗಳ ಬಗ್ಗೆ ಬಿಜೆಪಿಗೆ ಅರಿವಿಲ್ಲವೇ? ಅಥವಾ ಈ ಆದೇಶ ಆರ್ಎಸ್ಎಸ್ ಗೆ ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
2013ರಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಬಾರದು ಎಂಬ ಸುತ್ತೋಲೆ ಹೊರಡಿಸಿದ್ದರು. ಹಲವು ಇಲಾಖೆಗಳು ಈ ಹಿಂದೆ ಈ ನಿಟ್ಟಿನಲ್ಲಿ ಆರ್ಡರ್ ಮಾಡಿವೆ. ಹಾಗಾಗಿ ಅವರು ಆರ್ಎಸ್ಎಸ್ ವಿರೋಧಿಗಳಾ?. ಇವತ್ತು ಹಲವು ಲೋಪಗಳಿವೆ, ಅದಕ್ಕಾಗಿಯೇ ಇವರೆಲ್ಲರೂ ಬೆಳೆದಿದ್ದಾರೆ. ಸರ್ದಾರ್ ಪಟೇಲ್, ಇಂದಿರಾ ಗಾಂಧಿ ಆರ್ಎಸ್ಎಸ್ ಬ್ಯಾನ್ ಮಾಡಲು ಸಾಧ್ಯವಾಗಿಲ್ಲ ಅಂತಾರೆ. ಹೌದು ಆವತ್ತು ನಿಷೇಧ ವಾಪಸ್ ಪಡೆದಿದ್ದು ಸರಿಯಲ್ಲ ಅಂತ ನಾವು ಹೇಳುತ್ತೇವೆ ಎಂದರು.