ಬೆಂಗಳೂರು: ಆರು ತಿಂಗಳ ಹಿಂದೆ ನಡೆದ ವೈದ್ಯೆಯೊಬ್ಬರ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಎಫ್ಎಸ್ಎಲ್ ವರದಿಯ ಹಿನ್ನೆಲೆಯಲ್ಲಿ, ವೈದ್ಯೆ ಪತ್ನಿಗೆ ಅರಿವಳಿಕೆ ಔಷಧಿ ನೀಡಿ ಕೊಲೆಗೈದ ಗಂಭೀರ ಆರೋಪದ ಮೇಲೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಡಾ.ಕೃತಿಕಾ ರೆಡ್ಡಿಗೆ ಅನಾರೋಗ್ಯವಿತ್ತು. ಅದನ್ನು ಮುಚ್ಚಿಟ್ಟು ವಿವಾಹ ಮಾಡಿದ ಕಾರಣಕ್ಕೆ ಡಾ. ಮಹೇಂದ್ರ ರೆಡ್ಡಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೆ, ಈ ಕೊಲೆ ಪ್ರಕರಣ ಸಂಬಂಧ ಇದೀಗ ಸ್ಟೋಟಕ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಕುರಿತು ಕೃತಿಕಾ ಸಹೋದರಿ ಡಾ. ನಿಖಿತಾ ಮಾತನಾಡಿ, ಅಕ್ಕನ ಸಾವಿಗೆ ಪತಿ ಮಹೇಂದ್ರನೇ ಕಾರಣ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ.
ಕೃತಿಕಾ ಮೃತಪಟ್ಟ ದಿನವೇ ನಮಗೆ ಅನುಮಾನ ಬಂದಿತ್ತು. ಆಗಲೇ ಪೋಸ್ಟ್‌ಮಾರ್ಟಂ ಮಾಡಬೇಕು ಎಂದು ನಾವು ಒತ್ತಾಯಿಸಿದ್ದೆವು. ಆದರೆ ಮಹೇಂದ್ರ ಪೋಸ್ಟ್‌ಮಾರ್ಟಂ ಬೇಡ ಎಂದು ನಾಟಕ ಮಾಡಿದರು. ನಂತರ ತನಿಖೆಯ ವೇಳೆ ಮಹೇಂದ್ರಗೆ ಅನೈತಿಕ ಸಂಬಂಧವಿತ್ತು ಎಂಬುದು ಗೊತ್ತಾಯಿತು ಎಂದು ನಿಖಿತಾ ಹೇಳಿದ್ದಾರೆ.
‘ಕೃತಿಕಾ ಕ್ಲಿನಿಕ್ ತೆರೆಯುವ ಆಸೆ ಹೊಂದಿದ್ದರು. ಆದರೆ ಮಹೇಂದ್ರ ಯಾವತ್ತೂ ಬೆಂಬಲ ನೀಡಲಿಲ್ಲ. ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಲು ಸಹ ಒಪ್ಪಲಿಲ್ಲ. ಕೃತಿಕಾ ಅಸೌಖ್ಯದಲ್ಲಿದ್ದಾಗಲೂ ಪತಿಯೇ ಡ್ರಿಪ್ ಹಾಕುತ್ತಿದ್ದರು. ಮಹೇಂದ್ರ ನನಗೆ ಅನವಶ್ಯಕ ಚಿಕಿತ್ಸೆ, ಔಷಧ ಕೊಡುತ್ತಿದ್ದಾರೆ ಎಂದು ಆಕೆ ನನ್ನ ಬಳಿ ಹೇಳಿದ್ದಳು ಎಂದು ಡಾ. ನಿಖಿತಾ ಹೇಳಿದ್ದಾರೆ.
ಆದರೆ ಕೃತಿಕಾಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ನಾನು ಆಕೆಯ ಅಕ್ಕ ಆಗಿರುವುದರಿಂದ ನನಗೆ ಎಲ್ಲಾ ಗೊತ್ತು. ಮಹೇಂದ್ರನನ್ನು ಸ್ವಂತ ಮಗನ ರೀತಿ ನಮ್ಮ ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದರು. ನಾವಿಬ್ಬರು ಹೆಣ್ಣು ಮಕ್ಕಳು ಆಗಿರುವುದರಿಂದ ಆತನನ್ನೇ ಮಗ ಎಂದುಕೊಂಡಿದ್ದರು ಎಂದು ನಿಖಿತಾ ತಿಳಿಸಿದ್ದಾರೆ.
ಪೋಸ್ಟ್‌ಮಾರ್ಟಂ ವೇಳೆ ಮಹೇಂದ್ರ ಅತಿಯಾದ ನಾಟಕ ಮಾಡಿದ್ದ. ಕೃತಿಕಾ ದೇಹವನ್ನು ಕತ್ತರಿಸುವುದನ್ನು ನೋಡಲಾಗದು ಎಂದು ಕಣ್ಣೀರಿಟ್ಟು ದುಃಖ ವ್ಯಕ್ತಪಡಿಸಿದ್ದ. ಆ ಮೂಲಕ ಕೃತಿಕಾ ತಂದೆ-ತಾಯಿ ಎದುರು ಒಳ್ಳೆಯವನೆಂದು ಬಿಂಬಿಸಿದ್ದ ಎಂದು ನಿಖಿತಾ ಹೇಳಿದ್ದಾರೆ. ಆದರೂ ಅನುಮಾನ ಬಂದು ಪೋಸ್ಟ್ ಮಾರ್ಟಂಗೆ ಆಗ್ರಹಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.