ಬೆಂಗಳೂರು : ಬೆಂಗಳೂರು ಜಲ ಮಂಡಳಿ ಇದೀಗ ಮತ್ತೊಂದು ಗರಿ ಮುಡಿಗೇರಿಸಿಕೊಂಡಿದ್ದು, ವಿಶ್ವ ಮಟ್ಟದ ಸ್ಮಾರ್ಟ್ ವಾಟರ್ ನೆಟ್ವರ್ಕ್ಸ್ ಫೋರಂ ಎಂದು ಕರೆಯಲಾಗುವ “ಸ್ವಾನ್” ಸದಸ್ಯತ್ವ ಪಡೆದ ಭಾರತದ ಮೊದಲ ನೀರು ಬಳಕೆದಾರರ ಸಂಸ್ಥೆಯಾಗಿ ಹೊರಹೊಮ್ಮಿದೆ.
ಹೌದು ದಕ್ಷಿಣ ಏಷ್ಯಾದ ಪ್ರಮುಖ ಪರಿಸರ ತಂತ್ರಜ್ಞಾನ ವೇದಿಕೆಯಾದ ಐಎಫ್ಏಟಿ ಇಂಡಿಯಾ 2025 ಸಂದರ್ಭದಲ್ಲಿ ಸ್ವಾನ್ ಸದಸ್ಯತ್ವದ ಘೋಷಣೆ ಮೊಳಗಿದ್ದು, ಈ ಕಾರ್ಯಕ್ರಮದಲ್ಲಿ ಬಿಡಬ್ಲ್ಯುಎಸ್ಎಸ್‌ಬಿ ಅಧ್ಯಕ್ಷ ಡಾ. ವಿ. ರಾಮ ಪ್ರಸಾತ್ ಮನೋಹರ್, ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ರೂಪಾ ಮಿಶ್ರಾ, ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಅಭಿಯಾನದ ಮಹಾನಿರ್ದೇಶಕ ರಾಜೀವ್ ಕುಮಾರ್ ಮಿತಲ್ ಹಾಗೂ ಆಸ್ಟ್ರೇಲಿಯಾ, ಸ್ವೀಡನ್, ನಾರ್ವೆ ಮತ್ತು ನೆದರ್ ಲ್ಯಾಂಡ್ಸ್ನ ಜಾಗತಿಕ ನೀರು ರಾಯಭಾರಿಗಳು ಭಾಗವಹಿಸಿದ್ದರು.
ಜಲಮಂಡಳಿಗೆ ಸ್ವಾನ್ ಸದಸ್ಯತ್ವದ ಅವಕಾಶ ಲಭಿಸಿರುವ ಬಗ್ಗೆ ಬಿಡಬ್ಲ್ಯುಎಸ್ಎಸ್‌ಬಿ ಅಧ್ಯಕ್ಷ ಡಾ. ರಾಮ ಪ್ರಸಾತ್ ಮನೋಹರ್ ಹರ್ಷ ವ್ಯಕ್ತಪಡಿಸಿದ್ದಾರೆ. “ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಡಿ ಜಾಗತಿಕ ಮಟ್ಟದ ಪಾಲುದಾರಿಕೆಯನ್ನು ಪಡೆದುಕೊಳ್ಳುವುದು ಹಾಗೂ ಜಾಗತಿಕ ಗುಣಮಟ್ಟದ ಸೇವೆಯನ್ನು ಅಳವಡಿಸಿಕೊಳ್ಳುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗುರಿಯಾಗಿದೆ. ಇದರ ಭಾಗವಾಗಿ ಬೆಂಗಳೂರು ಜಲಮಂಡಳಿ ಸ್ವಾನ್ಗೆ ಸೇರ್ಪಡೆಯಾಗಿದೆ. ಇದು ದೇಶದ ನಗರ ನೀರು ಸರಬರಾಜು ವಲಯದಲ್ಲಿ ನಿರ್ಣಾಯಕ ಘಟ್ಟವಾಗಿದೆ ಎಂದು ತಿಳಿಸಿದರು.