ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಮುಷ್ಕರ ಹಮ್ಮಿಕೊಂಡಿದ್ದು, ಬೇಡಿಕೆ ಈಡೇರಿಕೆ ಕುರಿತು ಶೀಘ್ರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಗುರುವಾರದಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಮುಂದೂಡಲಾಗಿದೆ.
ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅಕ್ಟೊಬರ್ 15 ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿತ್ತು. ಈ ಕುರಿತು ಕಾರ್ಮಿಕ ಇಲಾಖೆ ಆಯುಕ್ತರು ಮಂಗಳವಾರ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಂಧಾನ ಸಭೆಯನ್ನೂ ನಡೆಸಿದ್ದರು. ಆದರೆ, ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದ ಕಾರಣ ಅ.27ಕ್ಕೆ ಸಭೆ ಮುಂದೂಡಲಾಗಿತ್ತು.
ಅದರ ನಡುವೆಯೇ ನೌಕರರ ಬೇಡಿಕೆ ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ 15 ದಿನಗಳಲ್ಲಿ ಜಂಟಿ ಕ್ರಿಯಾ ಸಮಿತಿ ಸೇರಿ ಇನ್ನಿತರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಗುರುವಾರದಿಂದ ಆರಂಭಿಸಬೇಕಿದ್ದಉಪವಾಸ ಸತ್ಯಾಗ್ರಹವನ್ನು ಮುಂದೂಡಿರುವುದಾಗಿ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.