ಮಂಡ್ಯ : ಗುಣಮಟ್ಟದ ಶಿಕ್ಷಣ ಹಾಗೂ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಶಾಸಕ ಕೆ.ಎಂ.ಉದಯ್ ಸೋಮವಾರ ಹೇಳಿದರು.
ಮದ್ದೂರು ನಗರದ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಮದ್ದೂರು ತಾಲೂಕು ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025- 2026 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡಿಸುವ ಸಂಬಂಧ ಮುಖ್ಯ ಶಿಕ್ಷಕರ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕಳೆದ ಹದಿನೈದು ವರ್ಷಗಳಿಂದ ಮದ್ದೂರು ತಾಲೂಕು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನಗಳಿಸುತ್ತಿತ್ತು. ಆದರೆ, ಈ ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಫಲಿತಾಂಶ ತೀರಾ ಕಳೆಪೆಯಾಗಿದ್ದು, ಹೀಗಾಗಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಈ ವಿಚಾರದಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಮತ್ತೋಮ್ಮೆ ಪುನರಾವರ್ತನೆ ಆಗದಂತೆ ಶಿಕ್ಷಕರು ಎಚ್ಚರವಹಿಸಬೇಕೆಂದು ಸೂಚನೆ ನೀಡಿದರು.
ಶಿಕ್ಷಕರು ಮತ್ತು ಪೋಷಕರು ಪ್ರತಿನಿತ್ಯ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಪರೀಕ್ಷೆ ಸಂದರ್ಭದಲ್ಲಿ ಭಯ ಮುಕ್ತವಾಗಿ ಪರೀಕ್ಷೆ ಬರೆಯುವಂತೆ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ನಿರಂತರವಾಗಿ ಶೈಕ್ಷಣಿಕ ಹಾಗೂ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ನಮ್ಮಿಂದ ವಿದ್ಯೆ ಕಲಿಸಲು ಸಾಧ್ಯವಿಲ್ಲ. ಅದನ್ನು ನೀವೆ ಮಾಡಬೇಕು. ಶಾಲೆಗಳಿಗೆ ಏನು ಸೌಕರ್ಯ, ಸವಲತ್ತು ಬೇಕಾಗುತ್ತೋ ಕೇಳಿ ಶಾಸಕರ ಅನುದಾನ ಹಾಗೂ ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪೂರೈಕೆ ಮಾಡಲಾಗುವುದು. ತಾಲೂಕಿನ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿವೆ ಅದನ್ನು ಹೊರಗೆ ತನ್ನಿ. ನಿಮ್ಮೆಲ್ಲರ ಕಠಿಣ ಪರಿಶ್ರಮದಿಂದ ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ. ಈ ಬಾರಿ ಕನಿಷ್ಠ ಶೇ 90 ರಷ್ಟು ಫಲಿತಾಂಶ ಹೆಚ್ಚಳವಾಗಲು ಶಿಕ್ಷಕರು ಸವಾಲಾಗಿ ಸ್ವೀಕರಿಸಬೇಕೆಂದು ಶಾಸಕ ಉದಯ್ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಧನಂಜಯ ಮಾತನಾಡಿ, ಪ್ರತಿ ಶಾಲೆಯಲ್ಲಿಯೂ ಶಿಕ್ಷಣದಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ, ಶಾಲಾ ಹಂತದಲ್ಲಿ ಕಠಿಣ ವಿಷಯಗಳ ಬಗ್ಗೆ ಪರೀಕ್ಷೆ ನಡೆಸಬೇಕು. ಮೌಲ್ಯ ಮಾಪನ ಮಾಡಿ ಮಕ್ಕಳು ಪಡೆದ ಅಂಕಗಳ ಬಗ್ಗೆ ಅರಿತು ಅವರಿಗೆ ಮಾರ್ಗದರ್ಶನ ನೀಡಬೇಕು.
ವಿಧ್ಯಾರ್ಥಿಗಳಿಗೆ ವಿಶೇಷ ತರಗತಿ, ಗುಂಪು ಅಧ್ಯಯನ ನಡೆಸುವ ಮೂಲಕ ಗುಣಮಟ್ಟದ ಶಿಕ್ಷಣ ಹೆಚ್ಚಿಸಿ ಉತ್ತಮ ಫಲಿತಾಂಶ ತರಬೇಕೆಂದು ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ 2024 -25 ನೇ ಸಾಲಿನಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಎಸ್ಎಸ್ಎಲ್ಸಿ ಮಂಡಳಿ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.
ಇದೇ ವೇಳೆ ಮದ್ದೂರು ತಾಲೂಕು ಫ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಂತೇಗೌಡ, ಪೂರ್ಣ ಪ್ರಜ್ಞಾ ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಅನಂತೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೆಶಕಿ ರಾಜೇಶ್ವರಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ನಾಗೇಶ್, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಇನ್ನೂ ‘ಚಿನ್ನ’ ನೋಡೋದಕ್ಕಷ್ಟೇ ಚೆನ್ನ: ದಾಖಲೆಯ ಗರಿಷ್ಠ ಮಟ್ಟಕ್ಕೆ ‘ದರ ಏರಿಕೆ’ | Gold Prices Today
Good News ; ‘RBI’ನಿಂದ ‘e₹’ ಅನಾವರಣ ; ಈಗ ಇಂಟರ್ನೆಟ್ ಅಗತ್ಯವಿಲ್ಲ, ಒಂದೇ ಕ್ಲಿಕ್’ನಲ್ಲಿ ‘ಪಾವತಿ’