ವಿಜಯಪುರ : ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತ ಘಟನೆ ವಿಜಯಪುರದಲ್ಲಿ ನಡೆದಿದ್ದು, ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನ ಬರ್ಬರ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ್ ಜುಲಜುಲೆ ಬಂಧಿತ ಆರೋಪಿಯಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ತನಿಖೆಗಿಳಿದ ಪೊಲೀಸರು 5 ಜನ ಆರೋಪಿಗಳನ್ನ ಸೆರೆಹಿಡಿಯಲು ಕನ್ನೂರು ಗ್ರಾಮದ ಹೊರವಲಯಕ್ಕೆ ತೆರಳಿದ್ದರು. ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಅರೆಸ್ಟ್ ಮಾಡಿದ್ದಾರೆ.
ಭಾನುವಾರ (ಅ.12) ರಾತ್ರಿ ವಿಜಯಪುರ ಜಿಲ್ಲೆಯ ಕನ್ನೂರು ಗ್ರಾಮದಲ್ಲಿ ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖುರೇಷಿ (24) ಎಂಬ ಇಬ್ಬರ ಹತ್ಯೆ ನಡೆದಿತ್ತು. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಸದ್ಯ ಆರೋಪಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.