ಮಂಗಳೂರು: ಸುಪ್ರೀಂ ಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದು ಅಪಮಾನಿಸಿದ ಕೃತ್ಯದ ವಿರುದ್ಧ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ ದೇಶದ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಆದರೆ. ಇನ್ನೊಂದೆಡೆ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ನಡೆಸಿದ ಕೃತ್ಯವನ್ನು ಸಮರ್ಥಿಸುತ್ತಿರುವ ಸನ್ನಿವೇಶವೂ ಕಂಡುಬರುತ್ತಿದೆ. ಈ ಬೆಳವಣಿಗೆ ಬಗ್ಗೆ ಕಾನೂನು ತಜ್ಞರು ಹಾಗೂ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಕೇಶ್ ಕಿಶೋರ್ ನಡೆಸಿರುವ ಸಂವಿಧಾನ ವಿರೋಧಿ ಕೃತ್ಯವನ್ನು ಕೆಲವರು ಸಮರ್ಥಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿರುವ ಪ್ರಕರಣಕ್ಕೆ ಕರ್ನಾಟಕವೂ ಸಾಕ್ಷಿಯಾಗಿವೆ. ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸರ್ಕಾರಿ ಅಭಿಯೋಜಕರೂ ಆದ ಮಂಗಳೂರಿನ ಹಿರಿಯ ವಕೀಲ ಮನೋರಾಜ್ ರಾಜೀವ್, ಅಂತಹಾ ಕೃತ್ಯವನ್ನು ಬೆಂಬಲಿಸಿ ಪ್ರಚಾರ ಮಾಡುವವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷರೂ ಆದ ಮನೋರಾಜ್ ರಾಜೀವ್, ಸುಪ್ರೀಂಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಮಾಡಿರುವ ಅಪಮಾನ. ಅದೊಂದು ಸಾಂವಿಧಾನದ ಮೇಲೆ ನಡೆದಿರುವ ದಾಳಿಯಾಗಿದ್ದು, ಭಯೋತ್ಪಾದನಾ ಕೃತ್ಯ. ಹಾಗಾಗಿ ಅಂತಹ ಕೃತ್ಯವನ್ನು ಬೆಂಬಲಿಸಬಾರದು ಎಂದು ಹೇಳಿದ್ದಾರೆ.
ಪ್ರಸಕ್ತ, ಕೆಲವರು ರಾಕೇಶ್ ಕಿಶೋರ್ ಶೂ ಎಸೆದ ಘಟನೆಯನ್ನು ಬೆಂಬಲಿಸಿ, ಆತನ ಕೃತ್ಯವನ್ನು ಸಮಥಿಸಿ ಫೇಸ್ ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಆದರೆ, ಅಂತಹಾ ಕೃತ್ಯವನ್ನು ಸಮರ್ಥಿಸುವುದು, ವಿಜೃಂಬಿಸುವುದು ಕೂಡಾ ನ್ಯಾಯಾಂಗ ನಿಂದನೆಯಾಗುತ್ತದೆ. ಕ್ರೀನಿಮಲ್ ಕಂಟೆಂಪ್ಟ್ ಆಫ್ ಕೋರ್ಟ್ ಕಾಯ್ದೆ 2ಸಿ, ಕಲಂ 15 ಪ್ರಕಾರ ಇಂಥವರ ವಿರುದ್ದವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯ ಮುಂದಿಟ್ಟಿದ್ದಾರೆ.
ಸಾಮಜಿಕ ಮಾಧ್ಯಮಗಳಲ್ಲಿ ಇಂತಹ ಕೃತ್ಯಗಳನ್ನು ಬೆಂಬಲಿಸಿ ಪೋಸ್ಟ್ ಹಾಕಿ ಕೃತ್ಯವನ್ನು ಬೆಂಬಲಿಸುವ, ವಿಜೃಂಭಿಸುವಂತೆ ಮಾಡುವವರನ್ನು ಪತ್ತೆ ಮಾಡುವಂತೆ ಮುಖ್ಯಮತ್ರಿ, ಗೃಹ ಸಚಿವರು ಹಾಗೂ ಕಾನೂನು ಸಚಿವರು ತಮ್ಮ ಇಲಾಖಾ ಅಧಿಕಾರಿಗಳಿಗೆ ಆದೇಶಿಸಬೇಕು. ಅಂಥವರನ್ನು ಗುರುತಿಸಿ ಅಟಾರ್ನಿ ಜನರಲ್ ರವರಿಗೆ ಪಟ್ಟಿ ರವಾನಿಸಿ, ಪ್ರಸಕ್ತ ದಾಖಲಾಗಿರುವ ಪ್ರಕರಣದಲ್ಲಿ ಈ ಥರ್ಡ್ ಪಾರ್ಟಿ ವ್ಯಕ್ತಿಗಳನ್ನು ಆರೋಪಿಗಳಾಗಿ ಸೇರ್ಪಡೆ ಮಾಡಲು ಮನವಿ ಮಾಡಬೇಕು ಎಂದು ಮನೋರಾಜ್ ರಾಜೀವ್ ಒತ್ತಾಯಿಸಿದ್ದಾರೆ.
ಇದು ನ್ಯಾಯಾಂಗ ಕ್ಷೇತ್ರದ ಮೇಲೆ ನಡೆಯುತ್ತಿರುವ ದಾಳಿಯಾಗಿರುವುದರಿಂದ ಹೈಕೋರ್ಟಿನಲ್ಲೂ ಪ್ರಕರಣ ದಾಖಲಿಸಲು ಅವಕಾಶ ಇದೆ. ಈ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ರವರು ಕ್ರಮ ಕೈಗೊಳ್ಳಬೇಕೆಂದೂ ವಕೀಲ ಮನೋರಾಜ್ ರಾಜೀವ್ ಮನವಿ ಮಾಡಿದ್ದಾರೆ.