ಬಾಗಲಕೋಟೆ : ನಮ್ಮ ದೇಶದಲ್ಲಿ ಅನೇಕ ಧರ್ಮ ಜಾತಿಗಳಿವೆ.ನಾವು ಜಾತಿ ಧರ್ಮ ಮಾಡಿದ್ದಲ್ಲ. ಮೊದಲಿಂದಲೂ ಬೆಳೆದು ಬಂದಿದೆ ನಾವು ಬೇರೆ ಜಾತಿಯವರನ್ನು ಪ್ರೀತಿಸಬೇಕೆ ಹೊರತು ದ್ವೇಷಿಸಬಾರದು ಇದನ್ನು ಮೂಲಭೂತವಾಗಿ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ನಡೆದ ಸರ್ವಧರ್ಮ ಮಹಾಸಂಗಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಹಿಂದೂ ಧರ್ಮದವರ ರಕ್ತ ಇಸ್ಲಾಂ ಧರ್ಮದವರ ರಕ್ತ ಬೇರೆ ಇರುತ್ತಾ? ಅನಾರೋಗ್ಯ ಇದ್ದಾಗ ಯಾವುದಾದರೂ ರಕ್ತ ಕೊಡ್ರಪ್ಪ ಅಂತ ಹೇಳುತ್ತೇವೆ. ಕಾಯಿಲೆ ವಾಸಿಯಾದಾಗ ನಿನ್ನದು ಯಾವ ಜಾತಿ ಅಂತ ಕೇಳುತ್ತೇವೆ. ಇದು ನ್ಯಾಯಾನ? ಬಸವಣ್ಣನವರು ದಯವೇ ಧರ್ಮದ ಮೂಲವಯ್ಯ ಅಂತ ಹೇಳಿದರು ಇದನ್ನು ತಿಳಿದುಕೊಂಡರೆ ಸಾಕು ಅಲ್ವಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವು ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ನಾನು ಕುರುಬರ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿದ್ನಾ? ಇಲ್ಲ ನಮ್ಮ ಅಪ್ಪ ಅವ್ವ ಕುರುಬರಾಗಿದ್ದರು. ಅದಕ್ಕೆ ನಾನು ಕುರುಬನಾಗಿದ್ದೇನೆ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಆದರೆ ಮನುಷ್ಯರನ್ನು ದ್ವೇಷಿಸುತ್ತೇವೆ. ಧರ್ಮ, ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ ಮನೆ ಮಾಡಿಕೊಂಡಿದೆ ಎಂದು ತಿಳಿಸಿದರು.