ಬೆಂಗಳೂರು: ಧಾರ್ಮಿಕ ಕ್ಷೇತ್ರವಾದ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅರ್ಚಕರು, ಜಾಲತಾಣಗಳಲ್ಲಿ ಛಾಯಾಚಿತ್ರ ಹರಿದಾಟ- ವಿಚಾರಣೆ ನಡೆಸಿ ಕ್ರಮ ಜರುಗಿಸಲು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ.
ಅಲ್ಲದೇ ಆ ಸಂದರ್ಭದಲ್ಲಿ ಯಾವುದೇ ಅನ್ಯ ಧರ್ಮೀಯರು ಭಾಗವಹಿಸಿರುವುದಿಲ್ಲ, ವಿನಾಕಾರಣ ಸುಳ್ಳು, ಅಪಪ್ರಚಾರಗಳನ್ನು ಹರಡುವವರ ಬಗ್ಗೆ ಸಚಿವರು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಾಲಯವಾದ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಹಲಸೂರಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಾನಕಿ ರಾಮ್ ರೆಡ್ಡಿ, ಪ್ರಧಾನ ಅರ್ಚಕರಾದ ಸುಂದರ್ ದಿಕ್ಷೀತ್ ಮತ್ತು ಸಹಾಯಕ ಆರ್ಚಕರಾದ ಎಸ್.ಸುರೇಶ್ ದೀಕ್ಷಿತ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದು, ಸಹಾಯಕ ಅರ್ಚಕರ ಜನ್ಮ ದಿನವಾಗಿದ್ದರಿಂದ ದಿನಾಂಕ:23/09/2025ರಂದು ದೇವಾಲಯದ ಆವರಣದೊಳಗೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆಯನ್ನು ಮಾಡಿರುತ್ತಾರೆ.
ದೇವಾಲಯದ ಆವರಣದೊಳಗೆ ಯಾವುದೇ ವ್ಯಕ್ತಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಮಾಡಲು ಅವಕಾಶವಿರುವುದಿಲ್ಲ. ಆದರೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಛಾಯಾಚಿತ್ರಗಳು ವಾಟ್ಸಪ್‌ಗಳಲ್ಲಿ ಹರಿದಾಡಿದೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಅರ್ಚಕರಾದವರು ದೇವಸ್ಥಾನದಲ್ಲಿ ಈ ರೀತಿಯಲ್ಲಿ ವರ್ತಿಸಿರುವುದರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ, ಈ ಬಗ್ಗೆ ಸೂಕ್ತ ವಿಚಾರಣೆ ಮಾಡಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಆದೇಶಿಸಿದ್ದಾರೆ.
ಕೆಲವೊಂದು ಜಾಲತಾಣಗಳಲ್ಲಿ ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ, ಅನ್ಯ ಧರ್ಮದವರು ಭಾಗವಹಿಸಿದ್ದರು ಎಂಬ ವಿಷಯವು ಸತ್ಯಕ್ಕೆ ದೂರವಾಗಿದೆ. ಈ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಲಾಗಿದ್ದು, ಇದು ಸಂಪೂರ್ಣ ಸುಳ್ಳು ಹಾಗೂ ದುರುದ್ದೇಶದಿಂದ ಕೂಡಿರುವುದು ಎಂದು ಕಂಡು ಬಂದಿರುತ್ತದೆ.
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ