ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ ರಚನೆಯೇ ಬೆಂಗಳೂರು ನಗರ ಜನರಿಗೆ ಮಾರಕವಾಗಿದ್ದು, ಈಗ ವಾರ್ಡ್ʼಗಳ ವಿಂಗಡಣೆಯೂ ದೋಷಪೂರಿತವಾಗಿದೆ. ಇದನ್ನು ತಕ್ಷಣವೇ ಸರಿಪಡಿಸಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ, ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಅವರು ರಾಜ್ಯ ಸರಕಾರವನ್ನು, ಮುಖ್ಯ ಆಯುಕ್ತರನ್ನು ಒತ್ತಾಯ ಮಾಡಿದರು.
ವಾರ್ಡ್ʼಗಳ ವಿಭಜನೆಯಲ್ಲಿನ ನ್ಯೂನ್ಯತೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಜಿಬಿಎ ಚುನಾವಣೆಗೆ ಜೆಡಿಎಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧತೆ ಮಾಡುವ ವಿಚಾರವಾಗಿ ಶನಿವಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರವು ತನ್ನ ಮೂಗಿನ ನೇರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ಆಗುವ ರೀತಿಯಲ್ಲಿ ವಾರ್ಡ್ ವಿಂಗಡಣೆ ಮಾಡಿದೆ. ಈ ವಿಂಗಡಣೆ ಸಾಕಷ್ಟು ನ್ಯೂನತೆಗಳಿಂದ ಕೂಡಿದ್ದು, ಬೆಂಗಳೂರು ಅಭಿವೃದ್ಧಿಗೆ ಮಾರಕವಾಗಿರುತ್ತದೆ. ಹೀಗಾಗಿ ಅದನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯ ಮಾಡಿದರು.
ಅಲ್ಲದೆ, ಈಗಿನಿಂದಲೇ ಜಿಬಿಎ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಆದೆಶದಂತೆ ಪ್ರತಿಯೊಬ್ಬರೂ ಪಕ್ಷವನ್ನು ಸಂಘಟನೆ ಮಾಡಬೇಕು ಎಂದು ಮುಖಂಡರು, ಕಾರ್ಯಕರ್ತರಿಗೆ ನೀರ್ದೇಶನ ನೀಡಿದರು.
ಇದೇ ವೇಳೆ 50 ಜನ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿ ಆ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಲಾಯಿತಲ್ಲದೆ, ಆಕಾಂಕ್ಷಿಗಳು ಹಗಲಿರುಳು ಪಕ್ಷ ಸಂಘಟನೆ ಮಾಡಿ ಉತ್ತಮ ಫಲಿತಾಂಶ ಸಾಧಿಸಬೇಕೆಂದು ರಮೇಶ್ ಗೌಡರು ಸೂಚಿಸಿದರು.
ಜೇಪಿ ಜಯಂತಿ ಆಚರಣೆ:
ಜನತಾ ಪರಿವಾರದ ಮೂಲ ಪುರುಷರಾದ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮ ಜಯಂತಿಯನ್ನು ಇದೇ ಆಚರಿಸಲಾಯಿತು. ಜೇಪಿ ಅವರ ಆಶಯದಂತೆ ಪಕ್ಷವನ್ನು ಕಟ್ಟುವ ಶಪಥವನ್ನು ಮುಖಂಡರು ಮಾಡಿದಲ್ಲದೆ, ಅವರಿಗೆ ಗೌರಪೂರ್ವಕವಾಗಿ ನಮನಗಳನ್ನು ಅರ್ಪಿಸಿದರು.
ಈ ಸಭೆಯಲ್ಲಿ ಶಾಸಕ ಟಿ. ಎನ್. ಜವರಾಯಿಗೌಡ, ಮಾಜಿ ಸಚಿವೆ ಲೀಲಾ ದೇವಿ ಆರ್. ಪ್ರಸಾದ್, ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ, ಪಕ್ಷದ ಜಿಲ್ಲಾ ಚುನಾವಣಾಧಿಕಾರಿ ಶೈಲಾ ಸಂತೋಜಿ ರಾವ್, ಬಿಬಿಎಂಪಿಯ ಮಾಜಿ ಉಪ ಮಹಾಪೌರ ಬಿ.ಭದ್ರೇಗೌಡ, ವಿರೋಧ ಪಕ್ಷದ ಮಾಜಿ ಸದಸ್ಯ ಟಿ. ತಿಮ್ಮೇಗೌಡ ಸೇರಿದಂತೆ ಪಕ್ಷದ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು, ಮಹಿಳಾ ವಿಭಾಗದ ಪದಾಧಿಕಾರಿಗಳು ಹಾಗೂ ಇನ್ನಿತರ ವಿಭಾಗಗಳ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ರೋಲ್ ಕಾಲ್ ಗುರೂಜಿಯಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗಲ್ಲ: ಮದ್ದೂರು ಶಾಸಕ ಕೆ.ಎಂ.ಉದಯ್ ಕಿಡಿ
‘ACF, RFO, DRF ನೇಮಕಾತಿ’ಗೆ ‘ಬಿಎಸ್ಸಿ ಅರಣ್ಯಶಾಸ್ತ್ರ ಪದವಿ’ ಕಡ್ಡಾಯಗೊಳಿಸಿ: ವಿದ್ಯಾರ್ಥಿಗಳ ಒತ್ತಾಯ