ಮಂಗಳೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಮೇಲೆ ವಕೀಲನೊಬ್ಬ ಶೂ ಎಸೆದ ಘಟನೆಯನ್ನು ಕಾಂಗ್ರೆಸ್ ಪಕ್ಷದ ಕಾನೂನು ಘಟಕ ಖಂಡಿಸಿದೆ. ಈ ಬಗ್ಗೆ ಕರ್ನಾಟಕದ ವಕೀಲರೂ ಆಕ್ರೋಶ ಹೊರಹಾಕಿದ್ದಾರೆ.
ಮಂಗಳೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆದ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್ ಪ್ರತಿಕ್ರಿಯಿಸಿ, ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ರಾಕೇಶ್ ಕಿಶೋರ್ ನಡೆಸಿರುವ ದಾಳಿಯನ್ನು ಇಡೀ ದೇಶವೇ ಖಂಡಿಸಬೇಕಿದೆ. ಕೃತ್ಯ ಎಸಗಿದ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲಿಸಿ, ಅಪರಾಧಿಗೆ ಶಿಕ್ಷೆ ಆಗಲೇಬೇಕಿದೆ ಎಂದಿದ್ದಾರೆ.
ನ್ಯಾಯಮೂರ್ತಿಗಳ ಮೇಲೆ ದಾಳಿ ಮಾಡಿರುವ ಘಟನೆಯನ್ನು ಸಹಿಸಲಾಗದು. ಇದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಮಾತ್ರವಲ್ಲ, ಸಂವಿಧಾನಕ್ಕೂ ಮಾಡಿರುವ ಅಪಚಾರವಾಗಿದೆ. ತಮ್ಮ ಮೇಲೆ ಶೂ ಎಸಗಿದವನನ್ನು ಕ್ಷಮಿಸಿರುವುದು ಮುಖ್ಯ ನ್ಯಾಯಮೂರ್ತಿಗಳ ಒಳ್ಳೆಯ ಗುಣವೇ ಆಗಿರಬಹುದು. ಆದರೆ, ಇದು ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಆಘಾತ ಎಂದು ಮನೋರಾಜ್ ರಾಜೀವ್ ಹೇಳಿದ್ದಾರೆ.
ಸಿಜೆಐ ಬಿ.ಆರ್.ಗವಾಯಿಯವರು ಒಳ್ಳೆಯ ಮನಸ್ಸುಳ್ಳವರು. ತಮ್ಮ ಮೇಲೆ ದಾಳಿ ಮಾಡಿದವನನ್ನು ಜೈಲಿಗೆ ಕಳುಹಿಸುವ ಅಧಿಕಾರ ಇದ್ದರೂ ಪ್ರಕರಣ ದಾಖಲಿಸದೆ ಬಿಟ್ಟಿದ್ದಾರೆ. ಆದರೆ, ಆ ಘಟನೆಯು ಇಡೀ ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಅಪಮಾನವಾಗಿರುವುದರಿಂದ, ಅಪರಾಧಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲೇಬೇಕು, ಕಠಿಣ ಶಿಕ್ಷೆ ಆಗಲೇಬೇಕು ಎಂದು ಮನೋರಾಜ್ ಪ್ರತಿಪಾದಿಸಿದ್ದಾರೆ.
ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯನ್ಯಾಯಮೂರ್ತಿ ಮೇಲೆಯೇ ಇಂಥದ್ದೊಂದು ಕೃತ್ಯ ನಡೆದಿದೆ ಎಂದರೆ, ಇದರ ಹಿಂದೆ ಪಿತೂರಿ ಇದೆ. ಒಂದೊಂದೇ ಘಟನೆಗಳನ್ನು ಮಾಡಿ ಜನರ ಪ್ರತಿಕ್ರಿಯೆ ಎದುರು ನೋಡುತ್ತಿದ್ದಾರೆ. ಜನರು ಪ್ರತಿಭಟಿಸಿದರೆ ಮಾತ್ರ ಆ ಸಂಚುಕೋರರು ಸುಮ್ಮನಾಗುತ್ತಾರೆ. ಇಲ್ಲದಿದ್ದರೆ ಬೇರೆ ಬೇರೆ ರೀತಿ ಕೃತ್ಯಗಳ ಮೂಲಕ ಸಂವಿಧಾನಕ್ಕೆ ಧಕ್ಕೆ ತರುವ ಕೃತ್ಯವನ್ನು ಮುಂದುವರಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸನಾತನಿಗಳು, ರಾಷ್ಟ್ರವಾದಿಗಳು ಎನ್ನುತ್ತಾ ದಾಳಿ ನಡೆಸಿ್ದರೆ ಅದು ರಾಷ್ಟ್ರೀಯವಾದ ಆಗಲಾರದು. ಅಂತಹಾ ಕೃತ್ಯವು ದೇಶ ವಿದ್ರೋಹದ ಕೃತ್ಯ. ಭಯೋತ್ಪಾದನೆ ರೀತಿಯ ಕೃತ್ಯವಾಗಿದೆ ಎಂದು ವಿಶ್ಲೇಷಿಸಿದ ಮನೋರಾಜ್, ಈ ಕೃತ್ಯವನ್ನು ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷನಾಗಿಯೂ ಖಂಡಿಸುತ್ತೇನೆ ಎಂದರು. ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೂ ಅವರು ಒತ್ತಾಯಿಸಿದರು.