ಬೆಂಗಳೂರು : ರಾಜ್ಯದ ರೈತರಿಗೆ ಸಿಹಿಸುದ್ದಿ ಸಿಕ್ಕಿದ್ದು, ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಮುಂದಿನ 30 ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಮುಂದಿನ 30 ದಿನಗಳಲ್ಲಿ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಜಮಾ ಮಾಡಲಾಗುವುದು, ಮುಂಗಾರಿನಿಂದ ಸುಮಾರು 12.54 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಈ ನಷ್ಟಕ್ಕೆ ಸುಮಾರು 2000 ಕೋಟಿ ರೂ. ಪರಿಹಾರ ಪಾವತಿ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಅಂತ್ಯದಲ್ಲಿ ಸುರಿದ ಭಾರಿ ಮಳೆ ಮತ್ತು ಭೀಮಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ನೆರೆಹಾವಳಿ ಉಂಟಾಗಿ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್ ಜಿಲ್ಲೆಗಳಲ್ಲಿ 7.24 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಹೀಗಾಗಿ ನಾಲ್ಕು ಜಿಲ್ಲೆಗಳಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಂಡಿದ್ದು, 10 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.