ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ಊಟಕ್ಕೆ ಎಂದು ಮನೆಗೆ ಕರೆಸಿ, ವಿದ್ಯಾರ್ಥಿನಿಗೆ ಕಾಲೇಜು ಎಚ್‌ಒಡಿ ಒಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಇದೀಗ ವರದಿಯಾಗಿದೆ. ನಿನಗೆ ಫುಲ್ ಮಾರ್ಕ್ಸ್ ಕೊಡುತ್ತೇನೆ ನಾನು ಹೇಳಿದಂತೆ ಕೇಳು ನನಗೆ ಸಹಕರಿಸು ಎಂದು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಹೌದು ವಿದ್ಯಾರ್ಥಿನಿಯನ್ನು ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತೆ ತಿಲಕ್ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ, ಆರೋಪಿ ಸಂಜೀವ್ ಕುಮಾರ್ ಮಂಡಲ್ ವಿರುದ್ಧ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಗೆ ಕಡಿಮೆ ಹಾಜರಾತಿ ಇದ್ದುದನ್ನೇ ಮುಂದಿಟ್ಟುಕೊಂಡು, ಪೂರ್ಣ ಅಂಕ ನೀಡುವ ಆಮಿಷವೊಡ್ಡಿ ಉಪನ್ಯಾಸಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯು ವಿದ್ಯಾರ್ಥಿನಿಯನ್ನು ಅಕ್ಟೋಬರ್ 2 ರಂದು ತನ್ನ ಮನೆಗೆ ಕರೆಸಿಕೊಂಡಿದ್ದಾರೆ. ತನ್ನ ಕುಟುಂಬದೊಂದಿಗೆ ಜತೆಯಾಗಿ ಊಟ ಮಾಡೋಣ ಎಂದು ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿನಿ ಅವರ ಮನೆಗೆ ತೆರಳಿದಾಗ ಮೊಂಡಲ್ ಒಬ್ಬಂಟಿಯಾಗಿ ಮನೆಯಲ್ಲಿದ್ದರು.
ಆಕೆ ಹೋರಡಲು ಮುಂದಾದಾಗ ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ಪೂರ್ಣ ಅಂಕಗಳನ್ನು ಕೊಡಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಅಷ್ಟರಲ್ಲಿ ಸ್ನೇಹಿತೆಯಿಂದ ಫೋನ್ ಕರೆ ಬಂದಿದ್ದು, ತುರ್ತಾಗಿ ಹೋಗಬೇಕಿದೆ ಎಂದು ಎಚ್‌ಒಡಿ ಮನೆಯಿಂದ ಹೇಗೋ ತಪ್ಪಿಸಿಕೊಂಡು ಬಂದೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.