ಮಂಡ್ಯ : ಹಕ್ಕು ಪತ್ರ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಚಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಂತಿ ಬಡಾವಣೆಯ ನಿವಾಸಿಗಳು ಮದ್ದೂರು ಶಾಸಕ ಕೆ.ಎಂ.ಉದಯ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ವೇಳೆ ಶಾಸಕ ಉದಯ್ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮದ ಮುಖಂಡ ರಾಜೇಶ್ ಮಾತನಾಡಿ, 50ಕ್ಕೂ ಹೆಚ್ಚು ವರ್ಷಗಳಿಂದ ಜಯಂತಿ ಬಡಾವಣೆಯ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.
ಬಡಾವಣೆಯ ನಿವಾಸಿಗಳು ಪ್ರತಿನಿತ್ಯ ಯಾವುದೇ ಮೂಲ ಸೌಕರ್ಯಗಳು ಇಲ್ಲದೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮದ ಸರ್ಕಾರಿ ಜಾಗದಲ್ಲಿ 100 ಕ್ಕೂ ಹೆಚ್ಚು ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ, ಯಾವುದೇ ಸೌಕರ್ಯಗಳನ್ನು ನೀಡಿಲ್ಲ. ಆಗ ನಿರ್ಮಿಸಿರುವ ಮನೆಗಳು ಸಹ ಶಿಥಿಲಗೊಂಡು ವಾಸಕ್ಕೂ ಸಹ ಯೋಗ್ಯವಾಗಿಲ್ಲ. ಹೀಗಾಗಿ ಹಕ್ಕು ಪತ್ರ ನೀಡಿದರೆ ಗ್ರಾಮ ಪಂಚಾಯಿತಿಯಿಂದ ವಸತಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ನಿವಾಸಿಗಳಿಂದ ಮನವಿ ಮತ್ತು ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್ ಈ ವಿಚಾರವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಶೀಘ್ರದಲ್ಲೇ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
BREAKING: ಅ.28ರವರೆಗೆ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ದಸರಾ ರಜೆ ವಿಸ್ತರಿಸಿ ಸರ್ಕಾರ ಅಧಿಕೃತ ಆದೇಶ