ಮಂಡ್ಯ :- ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿಪಕ್ಷ ನಾಯಕರು ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ವಾಗ್ಧಾಳಿ ನಡೆಸಿದರು. ಮದ್ದೂರು ತಾಲೂಕಿನ ಹೆಮ್ಮನಹಳ್ಳಿ, ಬೆಸಗರಹಳ್ಳಿ ಗ್ರಾಮಗಳಲ್ಲಿ ಪರಿಶಿಷ್ಟ ಸ್ಮಶಾನಗಳ ಅಭಿವೃದ್ಧಿ ಹಾಗೂ ಚಾಮನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಕೇವಲ 2 ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಆದರೆ, ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ವಿಪಕ್ಷಗಳು ಇಲ್ಲಸಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕ್ಷೇತ್ರದ ಅಭಿವೃದ್ಧಿಯನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಕ್ಷೇತ್ರ ಅಭಿವೃದ್ಧಿ ವಿಷಯದಲ್ಲಿ 25 ವರ್ಷದಷ್ಟು ಹಿಂದೆ ಉಳಿದಿದೆ. ಅದನ್ನು ಮನಗಂಡು ಸರ್ಕಾರದಿಂದ ವಿಶೇಷ ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡುತ್ತಿದ್ದು, ಇಷ್ಟೊಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗುತ್ತಿದೆ ಎಂಬ ಅಸೂಯೆಯಿಂದ ವಿರೋಧ ಪಕ್ಷಗಳು ಅನಗತ್ಯವಾಗಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.
ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೆರಿಸಲು ಸೋಮನಹಳ್ಳಿ, ಚಾಮನಹಳ್ಳಿ, ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದ ಬಳಿಕವಷ್ಟೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆನಂತರವೇ ಮದ್ದೂರು ಪುರಸಭೆಯನ್ನು ರಾಜ್ಯ ಸರ್ಕಾರ ಮೆಲ್ದರ್ಗೆಗೆರಿಸಿ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಬಲವಂತದ ಪ್ರಕ್ರಿಯೆ ಏನು ನಡೆದಿಲ್ಲ ಎಂದು ತಿಳಿಸಿದರು.
ತಮ್ಮ ಕ್ಷೇತ್ರಗಳನ್ನು ನಗರಸಭೆಯನ್ನಾಗಿ ಮೆಲ್ದರ್ಜೆಗೆರಿಸಲು ರಾಜ್ಯದ ಹಲವು ಶಾಸಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ರಾಜ್ಯದಲ್ಲಿ 2 ಪಟ್ಟಣಗಳನ್ನು ಮಾತ್ರ ನಗರಸಭೆಯನ್ನಾಗಿ ಮಾಡಲು ಅನುಮತಿ ನೀಡಿದೆ. ಇದಕ್ಕೆ ನಾನು ಸಾಕಷ್ಟು ಶ್ರಮ ಹಾಕಿದ್ದೇನೆ. ನಗರಸಭೆಯಾದರೆ ಹೆಚ್ಚಿನ ಅನುದಾನ ಬಂದು ಅಭಿವೃದ್ದಿಯಾಗುತ್ತದೆ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇನೆ ಎಂದರು.
ನನಗೆ ಕ್ಷೇತ್ರದ ಅಭಿವೃದ್ಧಿಯಷ್ಟೆ ಮುಖ್ಯ ಯಾರು ವಿರೋಧ ಮಾಡಿದರೂ ನಮ್ಮ ಕೆಲಸ ನಿರಂತರವಾಗಿ ನಡೆಯಲಿದೆ. ಈಗಾಗಲೇ ನಗರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ರೂಪುರೇಷೆ ಸಿದ್ದವಾಗಿದ್ದು, ವಿವಿಧ ಇಲಾಖೆಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ತಂದು ತಾಲೂಕನ್ನು ಸಮಗ್ರ ಅಭಿವೃದ್ದಿ ಮಾಡಲು ರೂಪುರೇಷೆ ನಡೆಸಿದ್ದೇನೆ. ಈ ಮೂಲಕ ಅಭಿವೃದ್ಧಿಯಲ್ಲಿ ತಾಲೂಕನ್ನು ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ವರ್ಷದಿಂದ ಉತ್ತಮವಾಗಿ ಅಧಿಕಾರ ನಡೆಸುವ ಮೂಲಕ ರಾಜ್ಯದ ಪ್ರತಿ ವರ್ಗಕ್ಕೂ ಅನುಕೂಲ ಕಲ್ಪಿಸಿದ್ದಾರೆ. ಇವರನ್ನು ಬದಲಾವಣೆ ಮಾಡಿ ಎಂದು ಯಾರು ಹೇಳಿಲ್ಲ. ವಿರೋಧ ಪಕ್ಷದವರು ಮಾಡಲು ಕೆಲಸವಿಲ್ಲದೆ ನವೆಂಬರ್ ನಲ್ಲಿ ರಾಜಕೀಯ ಕ್ರಾಂತಿಯಾಗುತ್ತದೆ, ಡಿಸೆಂಬರ್ ನಲ್ಲಿ ರಾಜಕೀಯ ಕ್ರಾಂತಿಯಾಗುತ್ತದೆ ಎಂದು ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ರಾಜಕೀಯ ಕ್ರಾಂತಿಯಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯತ್ತಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬುದು ನಾನು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ನಾಯಕರಲ್ಲಿ ಆಸೆಯಿದೆ. ಅವರು ಸಹ ಮುಂದಿನ ದಿನಗಳಲ್ಲಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ. ಅವರು ಸಿಎಂ ಆಗುವುದನ್ನು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮನ್ಮುಲ್ ನಿರ್ದೆಶಕ ಹರೀಶ್ ಬಾಬು, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಗ್ರಾಪಂ ಸದಸ್ಯರಾದ ಅನಂತು, ಮೂರ್ತಿ, ಪ್ರಸನ್ನ, ಮುರುಳಿಧರ, ಗುತ್ತಿಗೆದಾರ ಶರತ್, ಮುಖಂಡರಾದ ಪಣ್ಣೆದೊಡ್ಡಿ ಧನಂಜಯ, ಮಂಜುನಾಥ್, ಗೋಪಿ, ಕೃಷ್ಣಪ್ಪ, ಸತ್ಯಪ್ಪ, ವಸಂತರಾಜ್, ಅಶೋಕ್, ಸಿ.ಡಿ.ಕುಚೇಲ, ತ್ಯಾಗರಾಜು, ರಾಜೇಶ್, ಅಜಯ್, ಆನಂದ್, ಶ್ರೀನಿವಾಸ್, ರವಿ, ಪ್ರತಿಭಾ, ಚೈತ್ರಾ, ಅಣ್ಣಮ್ಮ, ಮಂಜು, ಸಾಧನ ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ