ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಪಂಪ್ಡ್ ಸ್ಟೋರೇಜ್ ಅಣುಕು ಶವಯಾತ್ರೆ ನಡೆಸುವ ಮೂಲಕ ಶನಿವಾರದಿಂದ ಪ್ರಾರಂಭಿಸಲಾಗಿದೆ. ಮಾಜಿ ಶಾಸಕ ಬಿ.ಸ್ವಾಮಿರಾವ್ ಹಸಿರು ನಿಶಾನೆ ತೋರಿಸಿ, ಯೋಜನೆ ಕೈಬಿಡುವ ಹಕ್ಕೊತ್ತಾಯದ ಪತ್ರಕ್ಕೆ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಎಸಿ ಕಚೇರಿ ಮುಂದೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಬಿ.ಸ್ವಾಮಿರಾವ್, ಶರಾವತಿ ಪಂಪ್ಡ್ ಸ್ಟೋರೇಜ್ ಅತ್ಯಂತ ಅವೈಜ್ಞಾನಿಕ ಪರಿಸರಕ್ಕೆ ಮಾರಕವಾದ ಯೋಜನೆಯಾಗಿದೆ. ಮಲೆನಾಡಿಗರ ಮೇಲೆ ಪದೇಪದೇ ಒಂದಿಲ್ಲೊAದು ಅವೈಜ್ಞಾನಿಕ ಯೋಜನೆ ಹೇರುವ ಕೆಲಸ ಮಾಡಲಾಗುತ್ತಿದೆ. ಶರಾವತಿ ನದಿ ನೀರಿನ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಸಾಗರ ಹೋರಾಟದ ನೆಲೆಯಾಗಿದ್ದು ಕಾಗೋಡು ಸತ್ಯಾಗ್ರಹದ ಮೂಲಕ ಗೇಣಿ ರೈತರಿಗೆ ಭೂಮಿ ದೊರಕಿಸಿ ಕೊಟ್ಟ ಹೆಗ್ಗಳಿಕೆ ಹೊಂದಿದೆ. ತಕ್ಷಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ನಿಲ್ಲಿಸಬೇಕು. ಕಾಗೋಡು ಚಳುವಳಿಯಲ್ಲಿ ಭಾಗವಹಿಸಿದ ಲೋಹಿಯಾ, ಗಣಪತಿಯಪ್ಪ ಸೇರಿ ಇನ್ನಿತರೆ ಹೋರಾಟಗಾರರ ಮೇಲೆ ಆಣೆ ಮಾಡಿ ಹೇಳುತ್ತಿದ್ದೇವೆ ಈ ಯೋಜನೆ ಕಾರ್ಯಸಾಧುವಾಗಲು ಬಿಡುವುದಿಲ್ಲ ಎಂದರು.
ಪರಿಸರ ವಾದಿ ಅಖಿಲೇಶ್ ಚಿಪ್ಳಿ ಮಾತನಾಡಿ, ಯೋಜನೆ ಕುರಿತು ಡಿಪಿಆರ್ ಕೇಳಿದರೆ ಕೊಡುತ್ತಿಲ್ಲ. ಪರಿಸರ ಮಾರಕವಾದ ಯೋಜನೆ ಕೈಬಿಡದೆ ಹೋದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಮಲೆನಾಡು ಭಾಗವನ್ನು ಒಳಗೊಂಡ ಪ್ರತ್ಯೇಕ ರಾಜ್ಯದ ಬೇಡಿಕೆ ಇರಿಸುವುದು ಅನಿವಾರ್ಯವಾಗುತ್ತದೆ. ಜಲಮೂಲ, ಪರಿಸರಸೂಕ್ಷö್ಮವನ್ನು ನಾಶ ಮಾಡುವ ಯೋಜನೆ ಕೈಬಿಟ್ಟು ಪರ್ಯಾಯ ವಿದ್ಯುತ್ ಉತ್ಪಾದನೆಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಯೋಜನೆ ಕುರಿತು ಕೆಪಿಸಿಎಲ್ ಯಾವುದೇ ಮಾಹಿತಿ ಕೊಡುತ್ತಿಲ್ಲ. ಯೋಜನೆ ಕರ‍್ಯಾರಂಭಕ್ಕಿಂತ ಮೊದಲೆ ಹಣ ಬಿಡುಗಡೆ ಮಾಡಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಕುರಿತು ಆಸಕ್ತಿ ವಹಿಸಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಹೊನ್ನಾವರ ಶಾಸಕರು ಯೋಜನೆ ವಿರೋಧಿಸಿದರೆ ಸಾಗರ ಕ್ಷೇತ್ರದ ಶಾಸಕರು ಯೋಜನೆ ಪರ ವಿಧಾನಸೌಧದಲ್ಲಿ ಮಾತನಾಡಿರುವುದು ಅವರ ಪರಿಸರ ವಿರೋಧಿ ಮನಸ್ಥಿತಿಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಟ್ಟು ಪರಿಸರ ಉಳಿಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಯೋಜನೆ ಕೈಬಿಡುವವರೆಗೂ ರೈತ ಸಂಘ ನಿರಂತರ ಹೋರಾಟ ನಡೆಸಲಿದೆ. ಯೋಜನೆ ಅನಾನುಕೂಲತೆಯನ್ನು ರೈತ ಸಂಘದ ಪ್ರಮುಖರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಅ. 4ರಿಂದ ಅ. 15ರವರೆಗೆ ನಿರಂತರವಾಗಿ ಹೋರಾಟ ನಡೆಯಲಿದ್ದು, ರಾಜ್ಯದ ಪ್ರಮುಖ ರೈತ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರ ಯೋಜನೆ ಕೈಬಿಡುವವರೆಗೂ ರೈತ ಸಂಘ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ ಮನೆಘಟ್ಟ, ಭದ್ರೇಶ್ ಬಾಳಗೋಡು, ಕುಮಾರ ಗೌಡ, ಶಿವು ಆಲಳ್ಳಿ, ದೇವರಾಜ್, ರಾಮಚಂದ್ರ, ರಾಜು, ಶ್ರೀಕರ ಹೊಸನಗರ, ಎಸ್.ವಿ.ಹಿತಕರ ಜೈನ್ ಇನ್ನಿತರರು ಹಾಜರಿದ್ದರು.
ಶಿವಮೊಗ್ಗ: ಸಾಗರದ ಪ್ರಸಿದ್ಧ ಅಂಗಡಿ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡಿದ ಇಬ್ಬರು ಅರೆಸ್ಟ್
ಸಾಗರ ಪೇಟೆ ಠಾಣೆ PSI ನಾಗರಾಜ್, ಗ್ರಾಮಾಂತ ಠಾಣೆಯ ಪಿಎಸ್ಐ ಸಿದ್ರಾಮಪ್ಪ ವರ್ಗಾವಣೆ
ಬ್ರಾಹ್ಮಣ ಅಭಿವೃದ್ಧಿ ನಿಗಮದ ಸೌಲಭ್ಯ ಪಡೆದುಕೊಳ್ಳುವಂತೆ ಮಂಡಳಿ ನಿರ್ದೇಶಕ ಪಿ.ಎಂ.ಮಾಲತೇಶ್ ಮನವಿ