ಬೆಂಗಳೂರು: ವಿಧಾನಸೌಧವು ಪಾರಂಪರಿಕ ಹಾಗೂ ಶಕ್ತಿ ಸೌಧವಾಗಿದ್ದು, ಈ ಕಟ್ಟಡದ ಒಳ ಮತ್ತು ಹೊರ ಆವರಣವು ಅತೀ ಸೂಕ್ಷ್ಮ ಪ್ರದೇಶವಾಗಿದೆ. ಈ ಕಾರಣದಿಂದ ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಮೆಟ್ಟಿಲು ಹಾಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ಇನ್ಮುಂದೆ ಕೆಲ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ವಿಧಾನ ಸೌಧವು ಪಾರಂಪರಿಕ ಹಾಗೂ ಶಕ್ತಿ ಸೌಧವಾಗಿದ್ದು, ಮಾನ್ಯ ಮುಖ್ಯ ಮಂತ್ರಿಯವರು, ಮಾನ್ಯ ಉಪ ಮುಖ್ಯ ಮಂತ್ರಿಯವರು, ಮಾನ್ಯ ಸಚಿವರು ಹಾಗೂ ಶಾಸಕಾಂಗ ಕಚೇರಿಗಳು / ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ, ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡದ ಒಳ ಮತ್ತು ಹೊರ ಆವರಣವು ಅತಿ ಸೂಕ್ಷ್ಮ ಪ್ರದೇಶವಾಗಿದೆ. ಆದಕಾರಣ, ವಿಧಾನ ಸೌಧ ಮುಂಭಾಗದ ಬೃಹತ್ ಮೆಟ್ಟಿಲು ಹಾಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಚಿವಾಲಯ / ಸರ್ಕಾರಿ ಇಲಾಖೆಗಳು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ ಈ ಕೆಳಕಂಡ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಸೂಚಿಸಿದೆ.
ವಿಧಾನ ಸೌಧದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅನುಸರಿಸಬೇಕಾದ ಕ್ರಮಗಳು (Standard Operating Procedures)
1. ವಿಧಾನಸೌಧದ ಮುಂಭಾಗ ಮತ್ತು ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮದ * ವೇದಿಕೆಗಾಗಿ ಯೋಜನೆಯನ್ನು ಮೊದಲೇ ಸಿದ್ದಪಡಿಸಿಕೊಂಡು ಲೋಕೋಪಯೋಗಿ ಇಲಾಖೆಯಿಂದ ಪೂರ್ವಾನುಮೋದನೆ ಪಡೆದು ಸಿದ್ದಪಡಿಸಿಕೊಳ್ಳತಕ್ಕದ್ದು.
2. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗರಿಷ್ಟ 600 ಆಸನಗಳ ವ್ಯವಸ್ಥೆಗೆ ಅವಕಾಶವಿರುವುದರಿಂದ, ಕಾರ್ಯಕ್ರಮವನ್ನು ಆಯೋಜಿಸುವವರು 600 ಆಸನಗಳ ಪ್ರವೇಶ ಮಿತಿಯನ್ನು ನಿಗಧಿಪಡಿಸತಕ್ಕದ್ದು.
3. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು 600ಕ್ಕೆ ಮಿತಿಗೊಳಿಸಿ, ಆಮಂತ್ರಣ ಪತ್ರಿಕೆಗೆ ಸಿಆಸುಇ ಕಾರ್ಯಕಾರಿ ಶಾಖೆಯ ದೃಢೀಕರಣ / ಸೀಲ್ ಪಡೆಯತಕ್ಕದ್ದು.
4. ಕಾರ್ಯಕ್ರಮದಲ್ಲಿ ಹಾಜರಾಗುವ ಅತೀ ಗಣ್ಯರು / ಗಣ್ಯರಿಗೆ ಜೇಷ್ಟತೆ ಮತ್ತು ಶಿಷ್ಟಾಚಾರದ ಪ್ರಕಾರ ಆಸನ ವ್ಯವಸ್ಥೆ ಒದಗಿಸಲು ರಾಜ್ಯ ಶಿಷ್ಟಾಚಾರ ವಿಭಾಗದಿಂದ ದೃಢೀಕರಣ ಪಡೆಯತಕ್ಕದ್ದು.
5. ಆಯೋಜಕರು ಕಾರ್ಯಕ್ರಮದ ಪ್ರತಿ ನಿಮಿಷದ ಕಾರ್ಯಕ್ರಮದ ವಿವರಗಳನ್ನು ಗಣ್ಯರು / ಅತಿಥಿಗಳಿಗೆ ಮುಂಚಿತವಾಗಿ ಒದಗಿಸತಕ್ಕದ್ದು.
6. ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸುವ 5 ನಿಮಿಷ ಮುಂಚಿತವಾಗಿ ಹಾಗೂ ಗಣ್ಯರು ಅಸೀನರಾದ ನಂತರ ವೇದಿಕೆ / ಸಭಾಂಗಣದಲ್ಲಿ ಅಡ್ಡಾದಿಡ್ಡಿ ಚಲನವಲನವನ್ನು ನಿರ್ಬಂಧಿಸುವುದು.
7. ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಉಡುಗೊರೆ, ಶಾಲು, ಮೊಮೆಂಟೋ ಇನ್ನಿತರ ವಸ್ತುಗಳನ್ನು ಮೊದಲೇ ಸಿದ್ದಪಡಿಸಿಕೊಳ್ಳುವುದು ಹಾಗೂ ಇವುಗಳನ್ನು ನೀಡುವ ಸ್ವಯಂ ಸೇವಕರಿಗೆ ವೇದಿಕೆ ಶಿಷ್ಟಾಚಾರದ ಕುರಿತು ಪೂರ್ವಭಾವಿಯಾಗಿ ಸೂಕ್ತ ತಿಳುವಳಿಕೆ ನೀಡತಕ್ಕದ್ದು.
8. ವೇದಿಕೆಯಲ್ಲಿ ಗಣ್ಯರು ಹಾಜರಾಗುವ ಮುನ್ನ ಮೇಜಿನ ಮೇಲೆ ಗಾಜಿನ ಲೋಟದಲ್ಲಿ ನೀರು (ಪ್ಲಾಸ್ಟಿಕ್ ಬಾಟಲ್ ಹೊರತುಪಡಿಸಿ ಹಾಗೂ ಒಣ ಹಣ್ಣುಗಳನ್ನು {Dry Fruits} ಇಡುವುದು.
9. ಕಾರ್ಯಕ್ರಮ ಪ್ರಾರಂಭಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಸಭಾಂಗಣದ ಧ್ವನಿವರ್ಧಕವ್ಯವಸ್ಥೆ ಹಾಗೂ ಇತರೆ ಸೌಲಭ್ಯಗಳು ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲಿಸಿಕೊಳ್ಳತಕ್ಕದ್ದು ಹಾಗೂ ಲೌಡ್ ಸ್ಪೀಕರ್‌ನ ಮಟ್ಟವು 55 ಡೆಸಿಬಲ್‌ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳತಕ್ಕದ್ದು.
10. ಕಾರ್ಯಕ್ರಮದ ಸಂಪೂರ್ಣ ವಿಡಿಯೋಗ್ರಾಫಿ ಮಾಡಿಸುವುದು.
11. ವೇದಿಕೆ ನಿರ್ಮಾಣಗೊಂಡಲ್ಲಿ, ಸದರಿ ವೇದಿಕೆಗಳ Fitness inspection ಹಾಗೂ Anti Sabotage Check ಸಲುವಾಗಿ, ಕನಿಷ್ಠ ಪಕ್ಷ 03 ಗಂಟೆ ಮೊದಲು ವೇದಿಕೆ ಸಿದ್ಧಪಡಿಸಿ, ಮುಂದಿನ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡುವುದು.
12. ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ 03 ಗಂಟೆ ಮೊದಲು ಲೋಕೋಪಯೋಗಿ ಇಲಾಖೆ (ಸಿವಿಲ್) ಮತ್ತು (ವಿದ್ಯುತ್) ಹಾಗೂ ಅಗ್ನಿ ಶಾಮಕದಳದ ಅಧಿಕಾರಿಗಳನ್ನು ಸಂಪರ್ಕಿಸಿ Fitness Certificateಗಳನ್ನು ಪಡೆದುಕೊಂಡು, ಡಿಸಿಪಿ, ವಿಧಾನಸೌಧ ಭದ್ರತಾ ವಿಭಾಗದ ಕಚೇರಿಗೆ ಒದಗಿಸುವುದು.
13. ಕಾರ್ಯಕ್ರಮದಲ್ಲಿ ಭಾಗವಹಿಸುವ ಅತೀ ಗಣ್ಯ/ಗಣ್ಯರಿಗೆ ವಿತರಿಸುವ ಪಾಸ್‌ಗಳ ಬಗ್ಗೆ ಮಾಹಿತಿ ನೀಡುವುದು.
14. ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಮಾಧ್ಯಮದವರಿಗೆ ಕಾರ್ಯಕ್ರಮದ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮಾಡಿಕೊಳ್ಳಲು ಸೂಕ್ತ ಸ್ಥಳವನ್ನು ನಿಗದಿಪಡಿಸುವುದು. ಹಾಗೆಯೇ ಕಾರ್ಯಕ್ರಮದ ನಂತರ ಮಾಧ್ಯಮದವರು ಗಣ್ಯ ವ್ಯಕ್ತಿಗಳಿಂದ ಬೈಟ್‌ರಿಯಾಕ್ಷನ್ ತೆಗೆದುಕೊಳ್ಳಲು ಅವರುಗಳಿಗೆ ಸೂಕ್ತ ಸ್ಥಳವನ್ನು ನಿಗಧಿಪಡಿಸುವುದು.
15. ಪತ್ರಿಕಾ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಟಿವಿ ಮಾಧ್ಯಮಗಳಿಗೆ ಪ್ರೇಕ್ಷಕರಿಗೆ ಆಡತಡೆ ಆಗದೆ ಪ್ರತ್ಯೇಕ ವೇದಿಕೆಯನ್ನು ಕಲ್ಪಿಸುವುದು.
16. ಗಣ್ಯರು ಭಾಷಣ ಮಾಡುವಾಗ ಪ್ರೇಕ್ಷಕರು ಘನತೆ ಮತ್ತು ಶಿಸ್ತಿನಿಂದ ಇರಲು ಆಯೋಜಕರು ಅಗತ್ಯ ಕ್ರಮವಹಿಸುವುದು.
17. ಕಾರ್ಯಕ್ರಮವನ್ನು ನಡೆಸುವಾಗ ದೊಡ್ಡ ಮೆಟ್ಟಿಲು, ಪ್ರತಿಮೆ, ರಸ್ತೆ, ಉದ್ಯಾನವನ ಇವುಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕಾರ್ಯಕ್ರಮ ನಡೆಸಲು ಆಯೋಜಕರು ಬದ್ದರಾಗಿರತಕ್ಕದ್ದು.
18. ಕಾರ್ಯಕ್ರಮ ಸಂದರ್ಭದಲ್ಲಿ ಕಚೇರಿಯ ಎಂದಿನ ಸಂಚಾರ ವ್ಯವಸ್ಥೆಗೆ ಯಾವುದೇ ಅಡಚಣೆಯಾಗದಂತೆ ಕಾರ್ಯಕ್ರಮವನ್ನು ಆಯೋಜಿಸತಕ್ಕದು ಹಾಗೂ ಕಛೇರಿ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯಕ್ರಮ ನಡೆಸತಕ್ಕದ್ದು.
19. ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನಿತರು ಮತ್ತು ಸಾರ್ವಜನಿಕರು ಆಹ್ವಾನ ಪತ್ರಿಕೆಯೊಂದಿಗೆ ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ತರುವ ಕುರಿತು ಆಯೋಜಕರು ತಿಳಿಸತಕ್ಕದ್ದು ಹಾಗೂ ಆಹ್ವಾನಿತರನ್ನು / ಸಾರ್ವಜನಿಕರನ್ನು ಆಯೋಜಕರೇ ಪ್ರವೇಶ ದ್ವಾರದ ಬಳಿ ಗುರುತಿಸಲು ಪೋಲಿಸ್ ಸಿಬ್ಬಂದಿಯೊಂದಿಗೆ ಸಹಕರಿಸತಕ್ಕದ್ದು.
20. ಕಾರ್ಯಕ್ರಮದಲ್ಲಿ ಲಘು ಉಪಹಾರ / ಊಟದ ವ್ಯವಸ್ಥೆ ಮಾಡಿದ್ದಲ್ಲಿ ವಿಧಾನ ಸೌಧದ ಪೂರ್ವ ದ್ವಾರದ ಹೊರ ಆವರಣದ ಬಲಭಾಗದಲ್ಲಿ ಮಾತ್ರ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು, ಹಾಗೂ ಸಿದ್ದಪಡಿಸಿದ ಆಹಾರಗಳನ್ನು ಮಾತ್ರ ತರತಕ್ಕದ್ದು, ಇಲ್ಲಿ ಯಾವುದೇ ಆಹಾರವನ್ನು ಸಿದ್ದಪಡಿಸಲು ಅವಕಾಶವಿರುವುದಿಲ್ಲ ಮತ್ತು ಗ್ಯಾಸ್ ಸಿಲಿಂಡರ್ ಬಳಕೆಯನ್ನು ನಿಷೇಧಿಸಲಾಗಿದೆ.
21. ಕಾರ್ಯಕ್ರಮ ನಡೆಯುವ ಸ್ಥಳವನ್ನು ಸ್ವಚ್ಛವಾಗಿರಿಸತಕ್ಕದ್ದು. ಪ್ಲಾಸ್ಟಿಕ್ ಬಾಟಲಿ/ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾರ್ಯಕ್ರಮದ ಬಳಕೆಗಾಗಿ ಪೇಪರ್ ಬಳಸಲು ಅಗತ್ಯ ಕ್ರಮವಹಿಸುವುದು.
22. ವಿಧಾನ ಸೌಧದ ಸರ್ಕಾರಿ ಕಾರ್ಯಕ್ರಮಗಳಿಗೆ ಸಾರ್ವಜನಿಕರನ್ನು ಆಹ್ವಾನಿಸುವ ಪೂರ್ವದಲ್ಲಿ ಉಪ ಪೋಲಿಸ್ ಆಯುಕ್ತರು, ವಿಧಾನ ಸೌಧ ಭದ್ರತಾ ವಿಭಾಗ, ಬೆಂಗಳೂರು ಇವರ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.
23. ಅಗ್ನಿಶಾಮಕ ಇಲಾಖೆಯಿಂದ ಮುಂಜಾಗೃತ ಕ್ರಮವಾಗಿ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು.
24. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಶುತ್ತೂಷಕ ಸಿಬ್ಬಂದಿ/ ಆಂಬುಲೆನ್ ಗಳನ್ನು ಸಿದ್ದಪಡಿಸಿಕೊಳ್ಳುವುದು.
25. ಕಾರ್ಯಕ್ರಮಕ್ಕೆ ಸಿದ್ಧತೆ ಮಾಡುವಾಗ ನಡೆಸುವಾಗ ಯಾವುದೇ ರೀತಿಯ ಅವಘಡ ಸಂಭವಿಸಿದರೆ ಆಯಾ ಇಲಾಖೆಯೇ ಜವಾಬ್ದಾರಿಯಾಗುತ್ತದೆ.
26. ಆಹ್ವಾನ ಪತ್ರಿಕೆ ಸಿದ್ಧಪಡಿಸುವಾಗ ಸಿಆಸುಇ (ರಾಜ್ಯ ಶಿಷ್ಠಾಚಾರ) ಇವರ ದೃಢೀಕರಣ ಪಡೆಯುವುದು ಕಡ್ಡಾಯವಾಗಿರುತ್ತದೆ.
27. ವಿಧಾನಸೌಧ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಡೋನ್ ನಿಷೇಧಿತ ಪ್ರದೇಶವೆಂದು ಗುರುತಿಸಿರುವುದರಿಂದ ಡೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ವಿಶೇಷ ಸೂಚನೆ: ವಿಧಾನ ಸೌಧದ ಬ್ಯಾಂಕೆಟ್ ಹಾಲ್ | ಬೃಹತ್ ಮೆಟ್ಟಿಲು ಬಳಿ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಇನ್ನಿತರ ಯಾವುದೇ ನಿಗಮ / ಮಂಡಳಿ / ಸ್ವಾಯತ್ತ ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದಲ್ಲಿ, ಮಾನ್ಯ ಮುಖ್ಯ ಮಂತ್ರಿಯವರ ಅನುಮೋದನೆ ಪಡೆಯುವ ಸಲುವಾಗಿ ಪೂರ್ವಭಾವಿಯಾಗಿ ಒಂದು ವಾರ ಮುಂಚಿತವಾಗಿ ಪ್ರಸ್ತಾವನ ಸಲ್ಲಿಸತಕ್ಕದ್ದು.
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?
ಬೆಂಗಳೂರಲ್ಲಿ ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆ ಯತ್ನ: ರೈಲು ಸಂಚಾರ ಪುನರಾರಂಭ