ಬೆಳಗಾವಿ : ಒಂದೆಡೆ ನಿನ್ನೆ ಮುಂದಿನ ವರ್ಷ ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪೂರ್ಣವಧಿ ನಾನೇ ಸಿಎಂ ಆಗಿರುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದು, ಇನ್ನೊಂದೆಡೆ ಮುಂದಿನ ನವೆಂಬರ್-ಡಿಸೆಂಬರ್ ತಿಂಗಳೊಳಗೆ ರಾಜ್ಯದಲ್ಲಿ ಕ್ರಾಂತಿ ಆಗುವುದು ನಿಶ್ಚಿತ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.
ಬೆಳೆ ಹಾನಿ ಸಮೀಕ್ಷೆಗೆ ಭೇಟಿ ನೀಡುವ ಮುನ್ನ ಇಂದು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ಈಗ ಜಗಳ ಆರಂಭವಾಗಿದೆ. ಈಗಾಗಲೇ ಕ್ರಾಂತಿ ಅಂತ ಹೇಳಿ ಸಚಿವ ರಾಜಣ್ಣ ಮನೆಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ, ಡಿ.ಕೆ.ಶಿವಕುಮಾರ್ ಹಠ ಬಿಡುತ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದರೆ ನಾವೇನೂ ಸರ್ಕಾರ ಮಾಡಲ್ಲ. ನಾವು ಚುನಾವಣೆಗೆ ಹೋಗಲು ಸಿದ್ದರಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ ಗ್ಯಾಂಗ್‌ಗೆ ಜಾತಿ ಸಮೀಕ್ಷೆ ಮಾತ್ರ ಮುಖ್ಯ. ಜಾತಿಗಳ ಮಧ್ಯೆ ಬೆಂಕಿ ಹಚ್ಚುವುದೇ ಸಿದ್ದರಾಮಯ್ಯನವರ ಕಾಯಕವಾಗಿದೆ. ಸಿದ್ದರಾಮಯ್ಯ ಬೆಂಕಿ ಹಚ್ಚುವ ಮುಖ್ಯಮಂತ್ರಿ. ಬೆಳೆ ಹಾನಿಯಿಂದ ದಸರಾ ಹಬ್ಬದ ಮನೆಯಲ್ಲಿ ಆಚರಣೆ ಮಾಡಲು ಆಗದೇ ಬೀದಿಯಲ್ಲಿ ಸಂತ್ರಸ್ತರು ನಿಂತಿದ್ದಾರೆ. ಆದರೂ ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.