ಸತತ 18 ವರ್ಷಗಳ ಬಳಿಕ RCB ತಂಡ ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಈ ಒಂದು ಸಂಭ್ರಮಾಚರಣೆಯಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು. ಇದೀಗ ಮತ್ತೊಂದು ವರದಿಯ ಪ್ರಕಾರ ಆರ್‌ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಈ ಹಿಂದೆ ಆರ್‌ಸಿಬಿ ಇಂತಹ ಸುದ್ದಿಯನ್ನು ನಿರಾಕರಿಸಿತ್ತು. ಆದರೆ ಇದೀಗ ಆರ್‌ಸಿಬಿ ಮಾಲೀಕರು ತಮ್ಮ ಬ್ಯಾಲೆನ್ಸ್ ಶೀಟ್‌ನಿಂದ ತೆಗೆದು ಮಾರಾಟ ಮಾಡಲು ನಿರ್ಧರಿಸಿದ್ದಾರೆಂದು ತೋರುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್‌ಸಿಬಿ ಫ್ರಾಂಚೈಸಿಯನ್ನು ಹೊಂದಿದೆ. ಇದೀಗ ಡಿಯಾಜಿಯೋ ಕಂಪೆನಿಯು ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿತ್ತು. ಅದು ಕೂಡ ಸುಮಾರು 2 ಬಿಲಿಯನ್ ಡಾಲರ್ಗೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 17 ಸಾವಿರ ಕೋಟಿ ರೂ.ಗೆ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಆ ಬಳಿಕ ಈ ಸುದ್ದಿಯನ್ನು ಆರ್‌ಸಿಬಿ ನಿರಾಕರಿಸಿತ್ತು.
ಇದೀಗ ಐಪಿಎಲ್ 2026 ಕ್ಕೂ ಮುನ್ನ ಒಟ್ಟಾರೆಯಾಗಿ ಲಭ್ಯವಿರುವ ಏಕೈಕ ತಂಡವಾಗಿ ಆರ್‌ಸಿಬಿ ಮಾರಾಟವಾಗಬಹುದು. ಬಿಗ್ ಗ್ಲೋಬಲ್ ಫಂಡ್‌ಗಳಲ್ಲಿ ಒಂದು ಅಥವಾ ಬೃಹತ್ ಹೂಡಿಕೆದಾರರು ಆರ್‌ಸಿಬಿ ತಂಡವನ್ನು ಖರೀದಿಸುವ ಸಾಧ್ಯತೆಯಿದೆ. ಏಕೆಂದರೆ ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ಅದನ್ನು ಬಳಸಿಕೊಳ್ಳುವ ಯಾರಿಗಾದರೂ ಶುಭವಾಗಲಿ ಎಂದು ಲಲಿತ್ ಮೋದಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.