ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಂಜು (27) ಕೊಲೆಯಾದ ಪತ್ನಿ ಧರ್ಮಶೀಲನ್ (29) ಆತ್ಮಹತ್ಯೆಗೆ ಶರಣಾದ ಪತಿ ಎಂದು ತಿಳಿದುಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆಯಾದ ಮಹಿಳೆ ತಂದೆ ದೂರು ನೀಡಿದ್ದು, ಪೆರಿಯಸ್ವಾಮಿ ಅವರು ಮೂಲತಃ ತಮಿಳುನಾಡಿನವರು. ನಗರದ ಉಲ್ಲಾಳು ಮುಖ್ಯರಸ್ತೆಯಲ್ಲಿ ಕುಟುಂಬಸಮೇತ ವಾಸವಾಗಿದ್ದರು. ಇವರ ನಾಲ್ವರು ಹೆಣ್ಣು ಮಕ್ಕಳ ಪೈಕಿ ಎರಡನೇ ಮಗಳಾದ ಮಂಜು ಅವರಿಗೆ 2022ರಲ್ಲಿ ಧರ್ಮಶೀಲನ್ ಎಂಬಾತನೊಂದಿಗೆ ಮದುವೆ ಮಾಡಲಾಗಿತ್ತು. ಮದುವೆಯ ಬಳಿಕ ಧರ್ಮಶೀಲನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಮಂಜು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸೆ.28ರಂದು ನನ್ನ ತಂಗಿಯ ಮಗ ಪ್ರಶಾಂತ್ ಜೊತೆ ಮಗಳ ಮನೆಗೆ ಹೋದಾಗ ಬಾಗಿಲು ಹಾಕಿತ್ತು. ನಿರಂತರವಾಗಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬರದ ಕಾರಣ ಮತ್ತೊಂದು ಕೀ ಮೂಲಕ ಬೀಗ ತೆರೆದು ಒಳಗೆ ಪ್ರವೇಶಿಸಿದಾಗ ಮಗಳು ರಕ್ತದ ಮಡುವಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದರೆ, ಧರ್ಮಶೀಲನ್ ಸೀಲಿಂಗ್ ಫ್ಯಾನ್ಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಹಾಗಾಗಿ, ನನ್ನ ಮಗಳು ಹಾಗೂ ಅಳಿಯ ಸಾವನ್ನಪ್ಪಿರುವ ಸಂಬಂಧ ತನಿಖೆ ನಡೆಸಬೇಕು ಎಂದು ಪೆರಿಯಸ್ವಾಮಿ ದೂರಿನಲ್ಲಿ ತಿಳಿಸಿದ್ದಾರೆ.