ಹುಬ್ಬಳ್ಳಿ : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಆರಂಭಿಸಲಾಗಿದ್ದು, ಇದೀಗ ಹುಬ್ಬಳ್ಳಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿರ್ಲಕ್ಷ್ಯವಹಿಸಿದ ಹಿನ್ನೆಲೆ ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮಹಾನಗರಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ ಶಹರದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸಿ, ಕರ್ತವ್ಯಲೋಪ ಮಾಡಿರುವ ಮಹಾನಗರಪಾಲಿಕೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಆದೇಶಿದ್ದಾರೆ.
ಸಮೀಕ್ಷೆಗೆ ನಿಯೋಜನೆಗೊಂಡಿರುವ ಎಲ್ಲ ಸಮೀಕ್ಷೆದಾರಿಗೆ ಅಗತ್ಯ ತರಬೇತಿ ನೀಡಿ, ಅಗತ್ಯ ಮಾರ್ಗದರ್ಶನ ಮಾಡಲಾಗಿದೆ. ಪ್ರತಿಯೊಬ್ಬರು ನೀಡಿರುವ ಸಮೀಕ್ಷಾ ಗುರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿಗೆ ಸಂಪರ್ಕಿಸಿ, ಪರಿಹರಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಸಮೀಕ್ಷೆಗೆ ಗುರಿ ನಿಗದಿ ಮಾಡಲಾಗಿದೆ. ಕರ್ತವ್ಯಲೋಪ, ನಿರ್ಲಕ್ಷ್ಯ ಮತ್ತು ಸಮೀಕ್ಷೆಯಲ್ಲಿ ಉದಾಸೀನತೆ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಂಡು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರವು ನಿರ್ದೇಶಿಸಿರುವುದರಿಂದ ಎಲ್ಲರೂ ಕಾಳಜಿ ಮತ್ತು ನಿರಂತರವಾಗಿ ಸಮೀಕ್ಷಾ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.