ಶಿವಮೊಗ್ಗ: ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಸೊರಬದ ಶ್ರೀ ಧನಲಕ್ಷ್ಮಿ ಮಹಿಳಾ ಪತ್ತಿನ ಸಹಕಾರ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷೆ ಕೆ.ಜಿ.ಲೋಲಾಕ್ಷಮ್ಮ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಮುರುಘಾ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಧನಲಕ್ಷ್ಮಿ ಮಹಿಳಾ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೌಟುಂಬಿಕ ವ್ಯವಸ್ಥೆಯಲ್ಲಿ ಪ್ರತಿ ಮಹಿಳೆಯರು ತಮ್ಮ ಹಿರಿದಾದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಈ ನಡುವೆಯೂ ಕೆಲವು ಹೆಣ್ಣು ಮಕ್ಕಳಿಗೆ ನೂರಾರು ರೀತಿಯಲ್ಲಿ ಸಂಕಷ್ಟಗಳು ಎದುರಾಗಿ ಕುಟುಂಬ ಮತ್ತು ಮಕ್ಕಳ ವಿದ್ಯಾಭ್ಯಾಸ ಪರದಾಡುತ್ತಿರುವುದನ್ನು ಮನಗಂಡು ಮಹಿಳೆಯರಿಗೆ ಆರ್ಥಿಕ ಸಹಕಾರ ಒದಗಿಸುವ ಹಿನ್ನೆಲೆಯಲ್ಲಿ ಸಂಘ ಸ್ಥಾಪಿಸಲಾಗಿದೆ ಎಂದರು.
ಷೇರುದಾರರ ಸಹಕಾರದಿಂದ ನಮ್ಮ ಸಂಘವು ಪ್ರತಿ ವರ್ಷದಂತೆ 2024-25ನೇ ಸಾಲಿನಲ್ಲಿಯೂ ಸಹ ಹೆಚ್ಚಿನ ಲಾಭ ಗಳಿಸಿದೆ. ನಮ್ಮ ಸಂಘದಿಂದ ಬಡ ಮಹಿಳರಿಗೆ ಹಾಗೂ ನೊಂದ ಮಹಿಳೆಯರಿಗೆ ಎಲ್ಲಾ ಜಾತಿ ಜನಾಂಗದವರಿಗೂ ಸಾಲವನ್ನು ನೀಡಿ ಅವರ ಸಂಕಷ್ಟಗಳಿಗೆ ನೆರವಾಗಿದೆ. ಸಂಘದ ಎಲ್ಲಾ ನಿರ್ದೇಶಕರ ಹಾಗೂ ಎಲ್ಲಾ ಸರ್ವಸದಸ್ಯರ ಸಹಕಾರದಿಂದ ಅಧಿಕಾರಿಗಳ ಮಾರ್ಗದರ್ಶನದಿಂದ ನಮ್ಮ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಹಿರಿಯ ಮಹಿಳಾ ಸಹಕಾರಿಗಳಾದ
ಆಶಾರಂಗನಾಥ್, ರೇಣುಕಮ್ಮ ಆನವಟ್ಟಿ, ಈರಮ್ಮ ಮಾವಲಿ, ಪೂರ್ಣಾಂಬಿಕಾ ಶಿವಕುಮಾರ್ ಗೌಡ್ರು ಜಂಬೇಹಳ್ಳಿ, ಎಂ. ಭಾರತಿ ಮಲ್ಲಿಕಾರ್ಜುನ್ ಸೊರಬ ಅವರನ್ನು ಸನ್ಮಾನ ಸನ್ಮಾನಿಸಲಾಯಿತು.
ಸನ್ಮಾನಿತರಾದ ರೇಣುಕಮ್ಮ ಹಾಗೂ ಎಂ. ಭಾರತಿ ಸಂಘದ ಬಗ್ಗೆ ಮತ್ತು ಆಡಳಿತ ಮಂಡಳಿಯ ಬಗ್ಗೆ ಮೆಚ್ಚುಗೆಯನ್ನು ಹಂಚಿಕೊಂಡರು. ಸಂಘವು ಇನ್ನು ಹೆಚ್ಚಿನ ಶ್ರಮವಹಿಸಿ ಹೆಚ್ಚಿನ ಲಾಭ ಗಳಿಸಲೆಂದು ಶುಭಾರೈಸಿದರು.