ಉಡುಪಿ : ಇತ್ತೀಚಿಗೆ ಉಡುಪಿಯಲ್ಲಿ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮುಹಮ್ಮದ್ ಫೈಸಲ್ ಖಾನ್ (27), ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮುಹಮದ್ ಶರೀಫ್ (37) ಹಾಗೂ ಸುರತ್ಕಲ್ ಕೃಷಾಪುರದ ಅಬ್ದುಲ್ ಶುಕೂರು ಯಾನೆ ಅದ್ದು(43) ಬಂಧಿತ ಆರೋಪಿಗಳು.
ಯಾವುದೋ ವ್ಯವಹಾರದ ಕಾರಣಕ್ಕಾಗಿ ಸಹಚರರೇ ಸೇರಿಕೊಂಡು ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಶನಿವಾರ ಮಣಿಪಾಲದಿಂದ ಕೊಡವೂರಿಗೆ ಒಂದೇ ಕಾರಿನಲ್ಲಿ ತೆರಳಿದ್ದ ಮೂವರು ಸಹಚರರು, ಸೈಫುದ್ದೀನ್ ತನ್ನ ಕೊಡವೂರಿನ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಹಿಂದಿನಿಂದ ಚೂರಿ ಹಾಗೂ ತಲವಾರಿನಿಂದ ಇರಿದು ಕೊಲೆಗೈದಿದ್ದರು. ಅಲ್ಲದೆ, ಈ ಹಿಂದೆ ಸೈಫುದ್ದೀನ್ ಮುಂದಾಳತ್ವದಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿಯೂ ಈ ಮೂವರು ಭಾಗಿಯಾಗಿದ್ದರು.
ಈ ಮೂವರು ಆರೋಪಿಗಳು ಸೈಫುದ್ದೀನ್ನ ಜೊತೆಗಿದ್ದು, ವ್ಯವಹಾರಗಳಲ್ಲಿ ಸಹಕಾರ ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಪೊಲೀಸರು ಮೂರು ತಂಡ ರಚಿಸಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯನ್ನು ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಮಲ್ಪೆ ಪಿಎಸ್ಐ ಅನಿಲ್ ಕುಮಾರ್ ಡಿ. ಹಾಗೂ ಸಿಬ್ಬಂದಿಯವರ ವಿಶೇಷ ತಂಡ ನಡೆಸಿದೆ.