ಮಂಗಳೂರು : ಪ್ಲ್ಯಾಟ್ನಲ್ಲಿ 12 ಕೆ.ಜಿ ಗಾಂಜಾ ಶೇಖರಿಸಿಟ್ಟು ಸರಬರಾಜು ಮಾಡಲು ಯೋಜಿಸಿದ್ದ ಕೇರಳದ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳನ್ನು ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಪ್ಸಿನ್, ಮುಹಮ್ಮದ್ ಸ್ವಾನೀದ್, ನಿಬಿನ್.ಟಿ. ಕುರಿಯನ್, ಮುಹಮ್ಮದ್ ಕೆ.ಕೆ., ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ, ಮೊಹಮ್ಮದ್ ಜಾಸೀಲ್ ವಿ ಮತ್ತು ಸಿದಾನ್.ಪಿ. ಎಂದು ತಿಳಿದುಬಂದಿದೆ.
ಸೆ.26ರಂದು ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಫ್ಸಿನ್, ಮೊಹಮ್ಮದ್ ಸ್ವಾನೀದ್ ಹಾಗೂ ಇತರರು ಗಾಂಜಾವನ್ನು ವಾಣಿಜ್ಯ ಪ್ರಮಾಣದಲ್ಲಿ ಖರೀದಿಸಿಕೊಂಡು ಬಂದಿದ್ದರು. ಇದನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಸಲುವಾಗಿ ಮಂಗಳೂರು ನಗರದ ಅತ್ತಾವರ ಕಾಪಿಗುಡ್ಡೆ ಮಸೀದಿ ಬಳಿಯಿರುವ ಕಿಂಗ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನ ಪ್ಲಾಟ್ನಲ್ಲಿ ಇರಿಸಿದ್ದರು.
ಈ ಕುರಿತು ಮಾಹಿತಿ ಪಡೆದ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ಮಂಗಳೂರಿನ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ. ಒಡಿಶಾ ಮೂಲಕ ಖರೀದಿಸಿ ತಂದಿದ್ದ 2,45,280 ರೂ. ಅಂದಾಜು ಮೌಲ್ಯದ 12 ಕೆ.ಜಿ 264 ಗ್ರಾಂ ಗಾಂಜಾ, 2 ಡಿಜಿಟಲ್ ತೂಕ ಮಾಪನ ಮತ್ತು 11 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.