ದಕ್ಷಿಣಕನ್ನಡ : ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್ ಯುವತಿಗೆ ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸ್ಪೋಟಕ ರಹಸ್ಯವೊಂದು ಬಯಲಾಗಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಆತನೇ ಮಗುವಿನ ತಂದೆ ಎಂದು ದೃಢಪಟ್ಟಿದೆ.
ಹೌದು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದ ಪ್ರಕರಣ ಈಗ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಜನಿಸಿದ್ದ ಮಗುವಿನ ತಂದೆ ಆರೋಪಿ ಕೃಷ್ಣ ಜೆ.ರಾವ್ ಎಂಬುದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಯುವತಿಯ ಕುಟುಂಬದವರು ಹಾಗೂ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆಪಿ ನಂಜುಂಡಿ ತಿಳಿಸಿದ್ದಾರೆ.
ಆರೋಪಿ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆ ಶಾಲಾ ದಿನಗಳಿಂದಲೂ ಪರಿಚಿತರು ಎನ್ನಲಾಗಿದೆ. ಮದುವೆಯಾಗುವ ಭರವಸೆ ನೀಡಿ ಆರೋಪಿಯು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮವಾಗಿ ಆಕೆ ಗರ್ಭವತಿಯಾಗಿದ್ದಳು. ನಂತರ ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡುವ ಭರವಸೆ ನೀಡಿದ್ದರು.
ಅದಾದ ಬಳಿಕ ಯುವತಿಗೆ ಹೆರಿಗೆ ಸಮಯ ಬಂದಾಗ ಆರೋಪಿ ಕುಟುಂಬದವರು ಮದುವೆಗೆ ನಿರಾಕರಿಸಿದ್ದರು. ಹೀಗಾಗಿ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಳು. ಬಳಿಕ ಎಫ್ಐಆರ್ ದಾಖಲಾಗಿತ್ತು. ಇಷ್ಟರಲ್ಲಿ ಆರೋಪಿ ನಾಪತ್ತೆಯಾಗಿದ್ದ. ನಂತರ ಆತನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ.
ಇದೀಗ ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಸಂಗ್ರಹಿಸಲಾಗಿತ್ತು. ಬಳಿಕ ಬೆಂಗಳೂರಿನ ಪ್ರಯೋಗಾಲಯಕ್ಕೆ ರಕ್ತ ಸಂಗ್ರಹ ಮಾದರಿಯನ್ನು ಕಳುಹಿಸಲಾಗಿತ್ತು. ಆರೋಪಿ ಕೃಷ್ಣ ಜೆ.ರಾವ್ ಕುಟುಂಬ ಡಿಎನ್ಎ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು. ಇದೀಗ ಡಿಎನ್ಎ ಟೆಸ್ಟ್ ಪಾಸಿಟಿವ್ ಬಂದಿದೆ. ಕೃಷ್ಣ ಜೆ.ರಾವ್ನಿಂದಲೇ ಸಂತ್ರಸ್ತೆ ಗರ್ಭಾವತಿಯಾಗಿರುವುದು ಸಾಬೀತಾಗಿದೆ.
ಹೀಗಾಗಿ ಹಿಂದೂ ಸಂಘಟನೆಗಳೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟಕ್ಕೆ ಇಷ್ಟವಿಲ್ಲ. ಇಬ್ಬರು ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದುತ್ವದ ಭದ್ರಕೋಟೆ ಪುತ್ತೂರಿನಲ್ಲಿರುವ ಹಿಂದೂ ಮುಖಂಡರು ಮುಂದೆ ಬರಬೇಕು. ಎರಡೂ ಕುಟುಂಬಗಳನ್ನು ಒಂದು ಮಾಡುವ ಕೆಲಸ ಮಾಡಬೇಕು ಎಂದು ಕೆಪಿ ನಂಜುಂಡಿ ಆಗ್ರಹಿಸಿದ್ದಾರೆ.