ದೊಡ್ಡಬಳ್ಳಾಪುರ : ಮನೆಯಲ್ಲಿ ತಾಯಿಗೆ ಸ್ನೇಹಿತರ ಜೊತೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ ಯುವಕನೊಬ್ಬ ಮರುದಿನ ಹೆಣವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ. ಹಳೆ ವೈಶಮ್ಯ ಹಿನ್ನೆಲೆಯಲ್ಲಿ ಸ್ನೇಹಿತರೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದ ನಿವಾಸಿಯಾಗಿದ್ದ ಬುಲೆಟ್ ರಘು (38) ಹತ್ಯೆಗೀಡಾಗಿರುವ ವ್ಯಕ್ತಿ. ಬೆಳಗಾವಿಯಲ್ಲಿ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ. ಬಾಶೆಟ್ಟಿಹಳ್ಳಿಯ ಯಲಹಂಕ ರಸ್ತೆಯಲ್ಲಿ ಬುಲೆಟ್ ರಘುನನ್ನು ದುಷ್ಕರ್ಮಿಗಳು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜು, ಕೊಲೆಯಾದ ವ್ಯಕ್ತಿ ಹೆಸರು ರಘು. 38 ವರ್ಷ. ತ್ಯಾಗರಾಜನಗರದ ನಿವಾಸಿ. ಏಳೆಂಟು ವರ್ಷಗಳ ಹಿಂದೆ ಈ ಊರು ಬಿಟ್ಟು ಬೆಳೆಗಾವಿಯಲ್ಲಿ ಹೋಟೆಲ್ ಇಟ್ಕೊಂಡು ಜೀವನ ಮಾಡುತ್ತಿದ್ದ, ಅಲ್ಲಿಯ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಅಲ್ಲಿಯೇ ವಾಸವಾಗಿದ್ದ. ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ.
ನಿನ್ನೆ ಸಂಜೆ 6 ಗಂಟೆ ಹೊತ್ತಿಗೆ, ಅವರ ತಾಯಿ ಜೊತೆ ಸ್ನೇಹಿತರ ಜೊತೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದ.ಮಾರಕಾಸ್ತ್ರದಿಂದ ತಿವಿದು, ಆಮೇಲೆ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಅತಿಯಾಗಿ ಕುಡಿದ ಅಮಲಿನಲ್ಲಿ ಕೊಲೆ ಮಾಡಲಾಗಿದೆ. ಅವನ ಸ್ನೇಹಿತರು ಸಿಕ್ಕ ಮೇಲೆ ಹೆಚ್ಚಿನ ಮಾಹಿತಿ ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಸ್ಥಳೀಯ ಸ್ನೇಹಿತರೆ ಕೊಲೆ ಮಾಡಿರುವ ಸಂಶಯ ಇದೆ. ಅವನ ಸ್ನೇಹಿತರನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಲಾಗಿದೆ ಎಂದರು.