ಮಂಡ್ಯ : ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ( ಸಿಎಸ್‌ಆರ್ ) ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಗೆಜ್ಜಲಗೆರೆ ಶಾಹಿ ಎಕ್ಸ್ ಪೋರ್ಟ್ ಪ್ರೈ ಲಿ ಹಿರಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಮೇಶ್ ಬಂಡಿ ಬುಧವಾರ ಹೇಳಿದರು.
ಮದ್ದೂರು ಪಟ್ಟಣದ ಮಳವಳ್ಳಿ ರಸ್ತೆಯ ಮದ್ದೂರು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಶಾಯಿ ಎಕ್ಸ್ ಪೋರ್ಟ್ ಪ್ರೈ ಲಿ ವತಿಯಿಂದ ಸಿ.ಎಸ್.ಆರ್ ನಿಧಿ ಯೋಜನೆಯಡಿ ಅಂದಾಜು 8 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಶುದ್ದ ಕುಡಿಯುವ ನೀರು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ದೂರಿನ ಶಾಹಿ ಎಕ್ಸ್ ಪೋರ್ಟ್ ಕಾರ್ಖಾನೆಯೂ ಅಂದಾಜು 5 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಅವರು ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ.
ಕಾರ್ಖಾನೆಯ ಸಿಎಸ್ಆರ್ ನಿಧಿಯಿಂದಲೂ ಕೂಡ ಕಾರ್ಮಿಕರ ಗ್ರಾಮಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ತಾಲೂಕಿನ ಮಲ್ಲನಕುಪ್ಪೆ, ಮರಕಾಡದೊಡ್ಡಿ ಹಾಗೂ ವೈದ್ಯನಾಥಪುರ ಗ್ರಾಮಗಳಲ್ಲಿ ಅಂದಾಜು 45 ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದೇವೆ.
ಗೆಜ್ಜಲಗೆರೆಯ ಸರ್ಕಾರಿ ಶಾಲೆಗೆ ಪೀಠೋಪಕರಣ, ಕಂಪ್ಯೂಟರ್ ಗಳನ್ನು ನೀಡಲಾಗಿದೆ. ಬಸ್ ನಿಲ್ದಾಣ, ಸೋಲಾರ್ ಬೀದಿ ದೀಪಗಳು, ಶುದ್ದ ಕುಡಿಯುವ ನೀರು ಘಟಕಗಳನ್ನು ನಿರ್ಮಿಸಿ ಸಾರ್ವಜನಿಕ ಸೇವೆಗೆ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ಮದ್ದೂರು ಸರ್ಕಾರಿ ಆಸ್ಪತ್ರೆಗೆ 12 ಇಸಿಜಿ ಯಂತ್ರಗಳನ್ನು ವಿತರಣೆ ಮಾಡಿದ್ದು, ಮುಂದಿನ ಸಿಎಸ್ಆರ್ ನಿಧಿಯಿಂದ ಮತ್ತಷ್ಟು ಮೂಲಸೌಕರ್ಯ ವಲಯದ ಪ್ರಗತಿಗೆ ಹೆಚ್ಚು ಬಳಕೆ ಮಾಡಲಾಗುವುದು ಎಂದರು.
ಇದೇ ವೇಳೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಮಹದೇವು, ಉಪಾಧ್ಯಕ್ಷ ರಾಘವಾ, ನಿರ್ದೇಶಕರು ಶಾಹಿ ಎಕ್ಸ್ ಪೋರ್ಟ್ ಪ್ರೈ ಲಿ ಸಂಪನ್ಮೂಲ ವಿಭಾಗದ ಅಧಿಕಾರಿಗಳಾದ ಶಿವಪ್ರಸಾದ್, ಲತೇಶ್, ಧನಂಜಯ್, ಹೇಮಂತ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ರಾಜ್ಯದಲ್ಲಿ ‘ರೇಷನ್ ಕಾರ್ಡ್’ ರದ್ದತಿಗೆ ಕಾರಣವೇನು? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | Ration Card Cancel