ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ರೇಷನ್ ಕಾರ್ಡ್ ಗಳು ದಿಢೀರ್ ರದ್ದುಗೊಂಡಿದ್ದಾವೆ. ರೇಷನ್ ತೆಗೆದುಕೊಂಡು ಬರೋದಕ್ಕೆ ನ್ಯಾಯಬೆಲೆ ಅಂಗಡಿಗೆ ತೆರಳಿದಂತ ಕುಟುಂಬಸ್ಥರಿಗೆ ಈ ಶಾಕ್ ಕೇಳಿ ಅಚ್ಚರಿ, ಆಘಾತ ಕೂಡ ಆಗಿದೆ. ಹಾಗಾದ್ರೇ ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿಗೆ ಕಾರಣವೇನು? ಒಂದು ವೇಳೆ ರೇಷನ್ ಕಾರ್ಡ್ ರದ್ದಾಗಿದ್ದರೇ ಏನು ಮಾಡಬೇಕು ಎಂಬುದಾಗಿ ಮುಂದೆ ಓದಿ.
ರಾಜ್ಯಾಧ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಕೂಡ ಕಾರಣ ಏನು ಅಂತ ರಿವೀಲ್ ಮಾಡಿದ್ದಾರೆ. ರೇಷನ್ ಕಾರ್ಡ್ ರದ್ದುಗೊಳ್ಳೋದಕ್ಕೆ ಮುಖ್ಯ ಕಾರಣ ಆ ಕುಟುಂಬದವರಲ್ಲಿ ಒಬ್ಬರು ಆದಾಯ ತೆರಿಗೆ ಪಾವತಿಸಿರೋದಾಗಿದೆ.
ರೇಷನ್ ಕಾರ್ಡ್ ರದ್ದು ಮಾಡಿರೋದು ರಾಜ್ಯ ಸರ್ಕಾರವಲ್ಲ, ಕೇಂದ್ರ ಸರ್ಕಾರ
ಸಾರ್ವಜನಿಕರಿಗೆ ನೆನಪಿದ್ಯೋ ಇಲ್ಲವೋ ಗೊತ್ತಿಲ್ಲ ಮೊದಲು ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆ, ಆ ಬಳಿಕ ಆಧಾರ್ ಗೆ ಪ್ಯಾನ್ ನಂಬರ್ ಕೂಡ ಲಿಂಕ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ಎಲ್ಲರೂ ರೇಷನ್ ಕಾರ್ಡ್ ಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗಿತ್ತು. ಇ-ಕೆವೈಸಿ ಮೂಲಕ ಒಪ್ಪಿಗೆಯನ್ನೂ ಸೂಚಿಸಲಾಗಿತ್ತು.
ಕೇಂದ್ರ ಸರ್ಕಾರದ ಸೂಚನೆಯಂತೆ ಈ ರೀತಿಯಾಗಿ ಇ-ಕೆವೈಸಿ ಮಾಡಿದ ಬಳಿಕ ಆಧಾರ್ ಗೆ ಪ್ಯಾನ್ ಲಿಂಕ್ ಮಾಡುವಂತೆ ತಿಳಿಸಿತ್ತು. ಈಗಾಗಲೇ ಬ್ಯಾಂಕ್ ಖಾತೆಗೆ ಪ್ಯಾನ್ ನಂಬರ್ ಲಿಂಕ್ ಮಾಡಲಾಗಿದೆ. ಹೀಗೆ ಹಂತ ಹಂತವಾಗಿ ಒಬ್ಬ ವ್ಯಕ್ತಿಯ ಹಣಕಾಸು ವ್ಯವಹಾರವನ್ನು ಸಂಪೂರ್ಣವಾಗಿ ತಿಳಿಯುವ ಕೆಲಸ ಮಾಡಲಾಯಿತು. ಆ ಕಾರಣದಿಂದ ಆದಾಯ ತೆರಿಗೆ ಪಾವತಿದಾರರ ಪಟ್ಟಿ ಸಂಗ್ರಹಿಸಲಾಗಿದೆ. ಆ ಪಟ್ಟಿಯಲ್ಲಿ ರೇಷನ್ ಕಾರ್ಡ್ ನಲ್ಲಿ ಯಾರೆಲ್ಲ ಹೆಸರಿದೆ ಎನ್ನುವವರ ಪಟ್ಟಿಯ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಕ್ಕೆ ನೀಡಿ ಇವರೆಲ್ಲ ನಕಲಿ ಪಡಿತರ ಚೀಟಿದಾರರು ಎಂದು ಹೇಳಿದ್ದ ಪರಿಣಾಮವೇ ರೇಷನ್ ಕಾರ್ಡ್ ರದ್ದಾಗಲು ಮೂಲ ಕಾರಣ ಎಂದೇ ಹೇಳಲಾಗುತ್ತಿದೆ.
ಬ್ಯಾಂಕ್ ನಲ್ಲಿ ಕೃಷಿ, ಶಿಕ್ಷಣ, ವಾಹನ ಸಾಲಕ್ಕಾಗಿ ಐಟಿ ಫೈಲಿಂಗ್ ತೋರಿಸಿದವರಿಗೂ ರದ್ದತಿಯ ಶಾಕ್
ರೈತರು ತಮ್ಮ ಕೃಷಿ ಕೆಲಸಗಳಿಗಾಗಿ ಸಾಲಸೌಲಭ್ಯಕ್ಕಾಗಿ ಐಟಿ ಫೈಲಿಂಗ್ ನಂತಹ ಕೆಲಸ ಮಾಡಿದ್ದು ಇಂದು ರೇಷನ್ ಕಾರ್ಡ್ ರದ್ದತಿಗೆ ಪ್ರಮುಖ ಕಾರಣವಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ, ವಾಹನ ಖರೀದಿಗೆ ಸಾಲ ಪಡೆಯಲು ಸುಲಭವಾಗಿ ಕಂಡುಕೊಂಡ ವಿಧಾನ, ಬ್ಯಾಂಕ್ ಮಂದಿ ಸಾಲ ಕೊಡೋದಕ್ಕೆ ಹೇಳಿದ್ದು ಐಟಿ ಫೈಲಿಂಗ್ ಮಾಡಿ. ನಿಮಗೆ ಸುಲಭವಾಗಿ ಸಾಲ ಸಿಗುತ್ತದೆ ಅನ್ನೋದು.
ಈ ಮಾತನ್ನು ನಂಬಿದಂತ ಬಡ ರೈತ ಕುಟುಂಬದವರು 1, 2, 3ರಂತೆ ಲಕ್ಷಾಂತರ ವ್ಯವಹಾರ ನಡೆಸಿದ್ದಾಗಿ ಐಟಿ ಫೈಲಿಂಗ್ ಮಾಡಿದ್ದನ್ನು ಬ್ಯಾಂಕ್ ಗೆ ತೋರಿಸಿದ್ದಾರೆ. ಆ ಬಳಿಕ ಸಾಲ ಸೌಲಭ್ಯವನ್ನು ಪಡೆದಿದ್ದಾರೆ. ಇದೀಗ ಇಂತಹವರೆಲ್ಲರ ಮಾಹಿತಿಯನ್ನು ಪ್ಯಾನ್ ಸಂಖ್ಯೆ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯು ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಆ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿ, ನೋಡಿ ನೀವು ಎಷ್ಟು ಆದಾಯ ತೆರಿಗೆ ಪಾವತಿಯ ಕುಟುಂಬಸ್ಥರಿಗೆ ರೇಷನ್ ಕಾರ್ಡ್ ಕೊಟ್ಟಿದ್ದೀರಿ. ರದ್ದು ಮಾಡಿ ಎಂಬುದಾಗಿ ಸೂಚಿಸಿದೆ ಎನ್ನಲಾಗುತ್ತಿದೆ. ಹೀಗಾಗಿಯೇ ಇಂದು ರಾಜ್ಯಾಧ್ಯಂತ ಹಲವರ ಪಡಿತರ ಚೀಟಿಗಳು ರದ್ದುಗೊಂಡಿವೆ ಎಂಬುದಾಗಿ ಮೂಲಗಳ ಮಾಹಿತಿಯಾಗಿದೆ.
ಒಬ್ಬರು ಆದಾಯ ತೆರಿಗೆ ಪಾವತಿಸಿದ್ದಕ್ಕೆ ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದು
ಮಹತ್ವದ ವಿಷಯವೆಂದ್ರೆ ರೇಷನ್ ಕಾರ್ಡ್ ರದ್ದುಗೊಂಡಿರುವಂತ ಇಡೀ ಕುಟುಂಬಸ್ಥರು ಆದಾಯ ತೆರಿಗೆ ಪಾವತಿದಾರರಲ್ಲ. ಅವರಲ್ಲೊಬ್ಬರು ನಾನಾ ಕಾರಣಗಳಿಂದ, ಸಾಲಸೌಲಭ್ಯದ ಕಾರಣದಿಂದ ಐಟಿ ಫೈಲ್ ಮಾಡಿದ್ದರ ಪರಿಣಾಮ ಇಂದು ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದಾಗಿದೆ. ಅವರೆಲ್ಲರೂ ಸ್ಥಿತಿವಂತರು, ಆದಾಯ ತೆರಿಗೆ ಪಾವತಿದಾರ ಕುಟುಂಬದವರು ಎಂಬುದಾಗಿ ಪರಿಗಣನೆಗೊಂಡು ಅವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದೆ.
ರಾಜ್ಯಾಧ್ಯಂತ ಬಹುತೇಕ ರೇಷನ್ ಕಾರ್ಡ್ ರದ್ದಾದವರಲ್ಲಿ ಇಡೀ ಕುಟುಂಬದವರು ಆದಾಯ ತೆರಿಗೆ ಪಾವತಿದಾರರಿಲ್ಲ. ನಿಜವಾಗಿಯೂ ಆದಾಯ ತೆರಿಗೆ ಪಾವತಿದಾರರ ಸಂಖ್ಯೆಯೂ ಕಡಿಮೆಯೇ ಎಂಬುದು ಉನ್ನತ ಮೂಲಗಳ ಮಾಹಿತಿಯಾಗಿದೆ. ಹೀಗಿದ್ದರೂ ಕುಟುಂಬದ ಒಬ್ಬರೇ ಒಬ್ಬರು ಮಾಡಿದಂತ ಐಟಿ ಫೈಲಿಂಗ್ ಕಾರಣ ಇದೀಗ ಇಡೀ ಕುಟುಂಬದವರ ರೇಷನ್ ಕಾರ್ಡ್ ರದ್ದುಗೊಂಡಿದೆ. ಇದು ಸಾಲ ಸೌಲಭ್ಯಕ್ಕಾಗಿ ಮಾಡಿದ್ದಿರಬಹುದು. ಇಲ್ಲವೇ ಇತರೆ ಕಾರಣಗಳಿಗೂ ಇರಬಹುದು. ಅಥವಾ ನಿಜವಾಗಿಯೂ ಆದಾಯ ತೆರಿಗೆ ಪಾವತಿ ಮಾಡುತ್ತಿರುವವರೂ ಆಗಿರಬಹುದಾಗಿದೆ. ಅಂತಹ ಎಲ್ಲಾ ಕುಟುಂಬದವರ ಪಡಿತರ ಚೀಟಿಯನ್ನು ಕೇಂದ್ರ ಸರ್ಕಾರ ನೀಡಿದಂತ ಪಟ್ಟಿಯ ಅನುಸಾರ ರಾಜ್ಯ ಸರ್ಕಾರ ರದ್ದುಪಡಿಸಿದೆ ಎನ್ನಲಾಗುತ್ತಿದೆ.
1, 2, 3 ಲಕ್ಷ ಆದಾಯ ಪಾವತಿ ತೋರಿಸಿದ ಕುಟುಂಬಸ್ಥರ ರೇಷನ್ ಕಾರ್ಡ್ ರದ್ದಿನಿಂದ ಕೈಬಿಡಲು ಮುಂದಾದ ರಾಜ್ಯ ಸರ್ಕಾರ
ನಿಜವಾಗಿಯೂ ಆದಾಯ ತೆರಿಗೆ ಪಾವತಿದಾರರು ಆಗಿದ್ದರೇ ಅವರ ರೇಷನ್ ಕಾರ್ಡ್ ರದ್ದು ಖಾಯಂ ಆಗಿದೆ. ಆದರೇ ಕೃಷಿ ಸಾಲ ಸೌಲಭ್ಯ ಸೇರಿದಂತೆ ಇತರೆ ಕಾರಣಗಳಿಗಾಗಿ, ಬ್ಯಾಂಕ್ ನವರ ಮಾತು ಕೇಳಿ 1, 2, 3 ಲಕ್ಷದಷ್ಟು ಆದಾಯ ತೆರಿಗೆ ಫೈಲಿಂಗ್ ತೋರಿಸಿದವರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಇಂತಹವರ ರೇಷನ್ ಕಾರ್ಡ್ ರದ್ದುಪಡಿಸಿದ್ದರೂ, ಮರಳಿ ಅವರಿಗೆ ಪಡಿತರ ಚೀಟಿಯನ್ನು ನೀಡೋದಕ್ಕೆ ಮುಂದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಅದು ಸಾಧ್ಯವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರೇಷನ್ ಕಾರ್ಡ್ ರದ್ದುಗೊಂಡಿದ್ದರೇ ಏನು ಮಾಡಬೇಕು.?
ರಾಜ್ಯದಲ್ಲಿ ರದ್ದಾದ ರೇಷನ್ ಕಾರ್ಡ್ ಮತ್ತೆ ಕೊಡುವುದಿಲ್ಲ ಎಂದೇ ಹೇಳಲಾಗುತ್ತಿದೆ. ಆದರೇ ಇದರ ನಡುವೆಯೂ ಪಡಿತರ ಚೀಟಿದಾರರಲ್ಲಿ ಯಾರೆಲ್ಲ ಆದಾಯ ತೆರಿಗೆ ಪಾವತಿದಾರರು ಇದ್ದಾರೆ ಆ ಕುಟುಂಬದ ಸದಸ್ಯನನ್ನು ಕಾರ್ಡ್ ನಿಂದ ತೆಗೆಸಿದಾಗ ಕಾರ್ಡ್ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಒಟ್ಟಾರೆಯಾಗಿ ರಾಜ್ಯಾಧ್ಯಂತ ರೇಷನ್ ಕಾರ್ಡ್ ರದ್ದತಿಗೆ ಕೇಂದ್ರ ಸರ್ಕಾರದ ಸೂಚನೆ ಕಾರಣ. ಆದಾಯ ತೆರಿಗೆ ಪಾವತಿಸುವವರ ಪಟ್ಟಿಯನ್ನು ನೀಡಿ, ಅವರು ರೇಷನ್ ಕಾರ್ಡ್ ಹೊಂದಿದ್ದರೇ ರದ್ದುಪಡಿಸುವಂತೆ ಸೂಚಿಸಿದ್ದರ ಪರಿಣಾಮವಾಗಿ ರದ್ದುಪಡಿಸಲಾಗಿದೆ ಎನ್ನಲಾಗುತ್ತಿದೆ. ಅದೇನೇ ಆದರೂ ರದ್ದಾದವರಲ್ಲಿ ಬಡವರು ಇದ್ದಾರೆ. ಯಾವುದೋ ಕಾರಣಕ್ಕೋ ಆದಾಯ ತೆರಿಗೆ ಫೈಲಿಂಗ್ ಮಾಡಿದವರೂ ಇದ್ದಾರೆ. ನಿಜವಾಗಿ ಆದಾಯ ತೆರಿಗೆ ಪಾವತಿಸುವವರ ಕಾರ್ಡ್ ರದ್ದಾಗಲೀ, ಆದರೇ ಬಡವರು, ಸಾಲ ಸೌಲಭ್ಯಕ್ಕಾಗಿ ಐಟಿ ಫೈಲ್ ಮಾಡಿದವರ ಕಾರ್ಡ್ ಮರಳಿ ನೀಡಲಿ ಎಂಬುದು ಸಾರ್ವನಿಕರ ಆಗ್ರಹವಾಗಿದೆ. ಆ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.