ಬೆಂಗಳೂರು : ಕನ್ನಡದ ಖ್ಯಾತ ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ (94) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರಳೆದಿದ್ದಾರೆ. ನಾಳೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಸಂಜೆ ಮೈಸೂರಿಗೆ ಶವ ಶಿಫ್ಟ್ ಮಾಡಲಾಗುತ್ತದೆ ಬಳಿಕ ಶುಕ್ರವಾರ ಭೈರಪ್ಪ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರಿಂದ ಮಾಹಿತಿ ತಿಳಿದು ಬಂದಿದೆ.
ಎಸ್.ಎಲ್ ಭೈರಪ್ಪ ಅವರ ಬಾಲ್ಯ ಅಷ್ಟೊಂದು ಚೆನ್ನಾಗಿರಲಿಲ್ಲ. ಆಗಿನ ಕಾಲದಲ್ಲಿ ಭೈರಪ್ಪನವರು ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತಾಗಿದ್ದರು. ಆದರೆ ಹೇಗೋ ಇದರಿಂದ ಪಾರಾಗಿದ್ದರೂ ಅವರ ಕುಟುಂಬ ಸದಸ್ಯರು ಪ್ಲೇಗ್ ಬಲಿಯಾಗಿದ್ದರು. ಅವರ ತಾಯಿ ಪ್ಲೇಗ್‌ಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಅವರ ಅಣ್ಣ, ಅಕ್ಕ ಪ್ಲೇಗ್ ಬಂದು ಒಂದೇ ದಿವಸ ಒಂದು ಗಂಟೆಯ ಒಳಗಡೆ ಮೃತಪಟ್ಟರು.
ತಾಯಿ ಮೃತಪಟ್ಟು 3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವನ್ನಪ್ಪಿದ್ದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು ಬಂದಿದ್ದೆ. ನನಗೂ ಪ್ಲೇಗ್ ಬಂದಿತ್ತು. ಆದರೆ ನನು ಹೇಗೂ ಪಾರಾಗಿದ್ದೆ ಎಂದು ಹೇಳಿದ್ದರು.ಶಾಲೆ ಓದುವ ಸಮಯದಲ್ಲಿ ಭೈರಪ್ಪ ಅವರ ತಾಯಿ ಇವರನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸ್ಥಳೀಯ ದೇವಾಲಯದಲ್ಲಿ ಸೋದರ ಮಾವ ಅರ್ಚಕರಾಗಿದ್ದರು.
ಸ್ವತಃ ಭೈರಪ್ಪ ಅವರೇ ಹೇಳಿಕೊಂಡಿದ್ದ ಹಾಗೆ ಸೋದರ ಮಾವನ ಮನೆಯಲ್ಲಿದ್ದ ದಿನಗಳು ಅತ್ಯಂತ ಕಷ್ಟವಾಗಿದ್ದವು. ಆತನ ಬೈಗುಳಗಳಿಂದ ನಾನು ಹೆದರಿ ಹೋಗಿದ್ದೆ ಎಂದು ತಮ್ಮ ಆತ್ಮಚರಿತ್ರೆ ʼಭಿತ್ತಿʼಯಲ್ಲಿ ಬರೆದಿದ್ದಾರೆ. ತಮ್ಮ ಪ್ಲೇಗ್‌ನಿಂದ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಯಾರೂ ಸಹಾಯ ಮಾಡಿರಲಿಲ್ಲ. ಆಗ ಭೈರಪ್ಪ ಅವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಬಂದಿದ್ದರು.