ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಸ್ತೆಗುಂಡಿ ಮುಚ್ಚಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತಿರುವ ವಿಚಾರವಾಗಿ, ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ ಹೇಳಿಕೆ ನೀಡಿದ್ದು, ಬಿಜೆಪಿ ಅವಧಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಮಾಡಿದ್ದಕ್ಕೆ ಇದೀಗ ರಸ್ತೆಯಲ್ಲಿ ಗುಂಡಿಗಳಾಗಿವೆ. 4 ವರ್ಷ ನೀವೇ ಇದ್ರಿ ಆಗ ಏನು ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಲ್ವಾ ರೂಲ್ ಮಾಡಿದ್ದು, 4 ವರ್ಷ ನಮ್ಮ 19 ಶಾಸಕರ ನೆರವಿನಿಂದ ಅಕ್ರಮವಾಗಿ ಸರ್ಕಾರವನ್ನು ರಚಿಸಿದರು. ನಾಲ್ಕು ವರ್ಷ ನೀವು ಏನು ಕಡೆದು ಕಟ್ಟಿ ಹಾಕಿದ್ರಿ? 4 ವರ್ಷ ನೀವು ಏನು ಮಾಡಿದ್ರಿ? ಬೆಂಗಳೂರು ನಿಮ್ಮ ಕಂಟ್ರೋಲ್ ನಲ್ಲಿ ಇದು ತಾನೇ? ಎಂದು ಪ್ರಶ್ನಿಸಿದರು.
ಬಿವೈ ವಿಜಯೇಂದ್ರ ಅವರ ತಂದೆ ಸಿಎಂ ಆಗಿದ್ರಲ್ಲ ಹಾಗೂ ನಿಮಗೆ ರಸ್ತೆ ಮೇಲಿನ ಗುಂಡಿಗಳ ಮೇಲೆ ಪ್ರೀತಿ ಇರಲಿಲ್ವಾ? ಅಶೋಕಣ್ಣ ನೀವು ಎಲ್ಲಾ ಖಾತೆಗಳನ್ನು ನಿರ್ವಹಿಸಿದ್ದೀರಿ. ಬಿಜೆಪಿ ಮನೆಯಲ್ಲಿಯೇ ಗುಂಡಿ ಬಿದ್ದಿದೆ. ಅವರ ಆ ಗುಂಡಿಗಳನ್ನು ನಾವೆಲ್ಲಿ ಓಪನ್ ಮಾಡ್ತೀವಿ ಅಂತ ಬಿಜೆಪಿಯವರು ರಸ್ತೆಗಳ ಗುಂಡಿಗಳನ್ನು ನೋಡುತ್ತಾ ಇದ್ದಾರೆ ಎಂದು ಬಿಜೆಪಿ ನಾಯಕರು ವಿರುದ್ಧ ಶಾಸಕ ಪ್ರದೀಪ ಈಶ್ವರ ವಾಗ್ದಾಳಿ ನಡೆಸಿದರು.