ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (KPCL) 404 ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ನೇಮಕಾತಿಗೆ ನಾಲ್ಕು ತಿಂಗಳ ಒಳಗೆ ಹೊಸತಾಗಿ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
404 ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2024ರ ಮೇ 8ರಂದು ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ವಿಭಾಗೀಯ ಪೀಠ, ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಮೇ 28ರಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾ ಮಾಡಿದೆ.
ನೇಮಕಾತಿ ಅಧಿಸೂಚನೆಯಲ್ಲಿ ಇಲ್ಲದಿದ್ದರೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ವೇಳೆಯಲ್ಲಿ ಋುಣಾತ್ಮಕ ಅಂಕ ಪದ್ಧತಿ ಅನುಸರಿಸಿದ್ದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆಹೋಗಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎನ್. ನವೀನ್ ಕುಮಾರ್ ಸೇರಿದಂತೆ ನಾಲ್ವರು ಸಲ್ಲಿಸಿದ್ದ ರಿಟ್ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ನೇಮಕಾತಿ ಪಟ್ಟಿ ರದ್ದುಪಡಿಸಿ, ಶೀಘ್ರವೇ ಮರು ಪರೀಕ್ಷೆ ನಡೆಸುವಂತೆ ಕೆಪಿಸಿಎಲ್ ಮತ್ತು ಸರಕಾರಕ್ಕೆ ನಿರ್ದೇಶನ ನೀಡಿತ್ತು.








