ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ರೂಪಿಸಲಾಗಿರುವ ಕರ್ನಾಟಕ ರೋಗ್ಯ ಸಂಜೀವಿನಿ ಯೋಜನೆಯನ್ನು ಅಕ್ಟೋಬರ್.1, 2025ರಿಂದ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ಅವರು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರದಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (KASS) ಅನುಷ್ಠಾನಗೊಳಿಸುವ ಸಂಬಂಧ ಮೇಲೆ ಕ್ರ.ಸಂ.(1) ರಿಂದ (6) ರಲ್ಲಿ ಓದಲಾದ ಸರ್ಕಾರದ ಆದೇಶ: ಸುತ್ತೋಲೆಗಳಲ್ಲಿ ಕೆಲವು ಕಾರ್ಯನೀತಿ ಸೂಚನೆಗಳನ್ನು ನೀಡಲಾಗಿದೆ.
ಯೋಜನೆಯಡಿ ಸರ್ಕಾರಿ ನೌಕರರ ನೋಂದಾವಣೆ, ಮಾಸಿಕ ವಂತಿಕೆ ಮತ್ತು ಯೋಜನೆಗೆ ಒಳಪಡಲು/ ಒಳಪಡದೇ ಇರಲು, ಆಯ್ಕೆ ವ್ಯಕ್ತಪಡಿಸುವುದು ಮುಂತಾದ ಅಂಶಗಳ ಕುರಿತು ಮೇಲೆ ಓದಲಾದ (6) ರ ದಿನಾಂಕ: 19.04.2025 ರ ಸುತ್ತೋಲೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಯೋಜನೆಗೆ ಒಳಪಡಲು ಇಚ್ಛೆ ವ್ಯಕ್ತಪಡಿಸುವ ಸರ್ಕಾರಿ ನೌಕರರು ಮಾಸಿಕ ವಂತಿಕೆಯನ್ನು ಯಾವ ಲೆಕ್ಕ ಶೀರ್ಷಿಕೆಯಡಿ ಪಾವತಿಸಬೇಕು ಹಾಗೂ ಇತರೆ ವಿಧಿ-ವಿಧಾನಗಳ ಬಗ್ಗೆ ಮಾರ್ಗಸೂಚಿಗಳನ್ನು (SOP) ನೀಡಲಾಗುವುದೆಂದು ಸದರಿ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸದರಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಮತ್ತಷ್ಟು ಪರಿಷ್ಕೃತ ಸೂಚನೆಗಳನ್ನು ನೀಡಿ ಅಕ್ಟೋಬರ್ 01, 2025 ರಿಂದ ಜಾರಿಗೆ ತರುವುದು ಅವಶ್ಯವೆಂದು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪರಿಶೀಲಿಸಿ, ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯು (KASS) ಅಕ್ಟೋಬರ್ 01, 2025 ರಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಯೋಜನೆಗೆ ಸರ್ಕಾರಿ ನೌಕರರ ಮಾಸಿಕ ವಂತಿಕೆಯನ್ನು ಪಾವತಿಸುವ ಬಗ್ಗೆ:
ಮಾಸಿಕವಂತಿಕೆಯನ್ನು ಪಾವತಿಸುವ ವಿಧಾನ: ಯೋಜನೆಯಡಿ ಸರ್ಕಾರಿ ನೌಕರರ ವೇತನದಿಂದ ಕಡಿತಗೊಳಿಸಲ್ಪಟ್ಟ ವಂತಿಕೆಯನ್ನು ಎಲ್ಲಾ ಡಿಡಿಓಗಳು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಈ ಉದ್ದೇಶಕ್ಕಾಗಿಯೇ ತೆರೆಯಲಾದ ಬ್ಯಾಂಕ್ ಖಾತೆಗೆ ಖಜಾನೆ-2 ರಲ್ಲಿ ಸೃಜಿಸಲಾಗುವ ಸ್ವೀಕೃತಿದಾರರ ಐಡಿ (ID) ಗೆ ಜಮಾ ಮಾಡತಕ್ಕದ್ದು. (ಬ್ಯಾಂಕ್ ಖಾತೆ ವಿವರಗಳನ್ನು ಡಿಡಿಓಗಳಿಗೆ HRMS ಮುಖಾಂತರ ತಿಳಿಸಲಾಗುವುದು).
ಸರ್ಕಾರಿ ನೌಕರನ ಪತಿ ಅಥವಾ ಪತ್ನಿ ಕೂಡ ಸರ್ಕಾರಿ ನೌಕರರಾಗಿರುವಲ್ಲಿ ವಂತಿಕೆಯನ್ನು ಪಾವತಿಸುವ ಬಗ್ಗೆ: ವಂತಿಕೆಯನ್ನು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಪಾವತಿಸುವ ಬಗ್ಗೆ ಸಂಬಂಧಪಟ್ಟ ಸರ್ಕಾರಿ ನೌಕರರೇ ತೀರ್ಮಾನಿಸಿ ಸಂಬಂಧಿಸಿದ ಡಿಡಿಒ ರವರಿಗೆ ಮಾಹಿತಿ ನೀಡುವುದು.
HRMS ವ್ಯಾಪ್ತಿಯಲ್ಲಿರದ (ಬೇರೆ ಇಲಾಖೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಿಯೋಜನೆ, ಅನ್ಯ ಸೇವೆ) ರಾಜ್ಯ ಸರ್ಕಾರಿ ನೌಕರರ ವಂತಿಕೆ ಕಟಾವಣೆ: ಅಂತಹ ನಿಯೋಜಿತ ನೌಕರರ ಮಾಸಿಕ ವೇತನದಲ್ಲಿ ವಂತಿಕೆಯನ್ನು ಕಟಾಯಿಸಿ, ಸಂಸ್ಥೆಯಿಂದ ನೇರವಾಗಿ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದು.
ವಂತಿಕೆ ಕಟಾವಣೆ ಪ್ರಾರಂಭಿಸುವುದು: ಯೋಜನೆಗೆ ಮಾಸಿಕ ವಂತಿಕೆಯನ್ನು ಮೇ 2025 ರಿಂದ ಸ್ವಯಂಚಾಲಿತವಾಗಿ ಕಟಾಯಿಸಲಾಗುವುದೆಂದು ಮೇಲೆ ಓದಲಾದ (6)ರ ದಿನಾಂಕ: 19.04.2025 ರ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಈ ಅಂಶವನ್ನು ಮಾರ್ಪಡಿಸಿ ವಂತಿಕೆಯನ್ನು ಅಕ್ಟೋಬರ್ 2025ರ ವೇತನದಿಂದ ಮುಂದಿನಂತೆ ಕಟಾಯಿಸುವುದು.
ಯೋಜನೆಯ ಉದ್ದೇಶಕ್ಕಾಗಿ ಸರ್ಕಾರಿ ನೌಕರನ “ಕುಟುಂಬ” ವ್ಯಾಪ್ತಿಗೆ ಒಳಪಡುವ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿ ಪರಿಷ್ಕರಣೆ: ಮೇಲೆ ಓದಲಾದ (5)ರ ದಿನಾಂಕ:02.04.205 ರ ಸರ್ಕಾರದ ಆದೇಶದಲ್ಲಿ “ಕುಟುಂಬ” ಪದವನ್ನು ಮರುವ್ಯಾಖ್ಯಾನಿಸಲಾಗಿದ್ದು, ಅದರಲ್ಲಿ ಸರ್ಕಾರಿ ನೌಕರನ ತಂದೆ ಮತ್ತು ತಾಯಿಯ ಮಾಸಿಕ ಆದಾಯ ಮಿತಿಯನ್ನು ಮಾಸಿಕ ರೂ. 17,000/- ಕ್ಕೆ ನಿಗದಿಪಡಿಸಲಾಗಿದ್ದು, ಈ ಆದಾಯ ಮಿತಿಯನ್ನು ಪರಿಷ್ಕರಿಸಿ ಮಾಸಿಕ ರೂ. 27,000/- ಗಳಿಗೆ ನಿಗದಿಪಡಿಸಲಾಗಿದೆ. (ವಿವಾಹಿತ ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಯವರಿಗೆ ಕೂಡ ಮೇಲಿನ ಆದಾಯ ಮಿತಿ ಹಾಗೂ ವಾಸ್ತವ್ಯದ ಷರತ್ತುಗಳು ಅನ್ವಯಿಸುತ್ತದೆ).
ಯೋಜನೆಗೆ ಒಳಪಡಲು ಅಥವಾ ಒಳಪಡದೇ ಇರಲು ಅಭಿಮತ ವ್ಯಕ್ತಪಡಿಸುವುದು: ನೌಕರರು ಈ ಯೋಜನೆಗೆ ಒಳಪಡಲು ಅಥವಾ ಒಳಪಡದೆ ಇರಲು (Opt-in, Opt-Out) ಇಚ್ಛಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಮೇಲೆ ಓದಲಾದ (6) ರಲ್ಲಿನ ದಿನಾಂಕ: 19.04.2025 ರ ಸುತ್ತೋಲೆಯ ಅನುಬಂಧ-1 ಹಾಗೂ ಅನುಬಂಧ-2 ರಲ್ಲಿ ನಿಗದಿಪಡಿಸಿರುವ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓಗಳಿಗೆ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿತ್ತು. ಆದರೆ ನೌಕರರ ಕೋರಿಕೆಯನ್ನು ಗಮನಿಸಿ, ಈ ಸೂಚನೆಗಳನ್ನು ಭಾಗಶ: ಪರಿಷ್ಕರಿಸಿ- ಯೋಜನೆಗೆ ಒಳಪಡಲು ಅಥವಾ ಒಳಪಡದೆ ಇರಲು (Opt-in, Opt-Out) ಲಿಖಿತ ಘೋಷಣೆಯನ್ನು ಸಂಬಂಧಪಟ್ಟ ಡಿಡಿಒಗಳಿಗೆ ಸಲ್ಲಿಸಲು 18 ಅಕ್ಟೋಬರ್, 2025 ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಆದರೆ ಈ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು ಪರಿಗಣಿಸಲಾಗುವುದು.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (KASS)ಯ ವ್ಯಾಪ್ತಿ: ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ಗಳಡಿ ಈ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರಿಗೆ ರೂಪಿಸಿರುವ ಯೋಜನೆಯಾಗಿದೆ. ಈ ಸಂಬಂಧ ಮೇಲೆ ಓದಲಾದ ಕ್ರಮ ಸಂಖ್ಯೆ (2) ಹಾಗೂ (3) ದಿನಾಂಕ: 05.09.2022 ಹಾಗೂ ದಿನಾಂಕ 09.03.2023 ರ ಸರ್ಕಾರದ ಆದೇಶಗಳಲ್ಲಿ ಸ್ಪಷ್ಟಿಕರಣಗಳನ್ನು ನೀಡಲಾಗಿದೆ.