ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರೈತರ ಕೃಷಿಯಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೃಷಿ ವಿವಿಗಳು ಕೆಲಸ ಮಾಡಲಿ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿವಪ್ಪ ನಾಯಕ ಹೆಸರೇಳಿದರೇ ಮಲೆನಾಡಿನಲ್ಲಿ ಹೊಸ ಸಂಚಲನವೇ ಸೃಷ್ಠಿಯಾಗುತ್ತಿದೆ. ಇಂತಹ ಕೆಳದಿ ಶಿವಪ್ಪ ನಾಯಕರ ಹೆಸರಿನಲ್ಲಿ ವಿವಿಯನ್ನು ಸ್ಥಾಪಿಸಿರುವುದು ಸಂತಸದ ಸಂಗತಿಯಾಗಿದೆ. ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಶ್ರಮದಿಂದ ಇರುವಕ್ಕಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಸ್ಥಾಪನೆಯಾದಂತೆ ಆಯಿತು ಎಂದರು.
ಭಾರತದ ತಲಾದಾಯದಲ್ಲಿ ಕೃಷಿಯ ಕೊಡುಗೆ ಪಾಲು ಹೆಚ್ಚಿನದ್ದು ಆಗಿದೆ. ಆದರೇ ರೈತರು ಬೆಳೆದಂತ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅವರ ಬೆಳೆಗೆ ಸರಿಯಾದ ಬೆಲೆ ಸಿಗಬೇಕು. ಪ್ರಗತಿ ಪರ ಕೃಷಿ ನಡೆಸುವಂತೆ ಆಗಬೇಕು. ಸಾಂಪ್ರದಾಯಿಕ ಮೂಲ ಕೃಷಿ ಪದ್ದತಿ ಬದಲಾವಣೆಯಾಗಬೇಕು ಎಂಬುದಾಗಿ ಹೇಳಿದರು.
ಕೃಷಿ ವಿವಿಗಳು ರೈತರನ್ನು ಸಾಂಪ್ರದಾಯಿಕ ಕೃಷಿಯಿಂದ ಪ್ರಗತಿಪರ ಕೃಷಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕು. ಕೃಷಿ ಉತ್ಪನ್ನಗಳು ಹೆಚ್ಚಾಗಬೇಕು. ನಮ್ಮ ದೇಶದಲ್ಲಿ ಪ್ರಗತಿಪರ ಕೃಷಿ ಹೆಚ್ಚಾಗಬೇಕು ಎಂದರು.
ಇರುವಕ್ಕಿ ಶಿವಪ್ಪ ನಾಯಕ ಕೃಷಿ ವಿವಿ ಸ್ಥಾಪನೆಯ ವೇಳೆ ಕಾಗೋಡು ತಿಮ್ಮಪ್ಪನವರ ಪರಿಶ್ರಮ ಬಹಳಷ್ಟಿದೆ. ಕಾಗೋಡು ತಿಮ್ಮಪ್ಪನವರು ಇದಕ್ಕೆ ಬೇಕಿದ್ದಂತ 750ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಬಿಡಿಸಿಕೊಟ್ಟಿದ್ದಾರೆ. ಅದು ಹೆಮ್ಮಯ ವಿಚಾರವಾಗಿದೆ. ಆನಂತ್ರ ಅದನ್ನು ಪೋಷಿಸಿದ್ದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎಂದು ಹೇಳಿದರು.
ಮಲೆನಾಡು ಸೇರಿದಂತೆ ರಾಜ್ಯದ ವಿವಿಧೆಡೆ ಎಲೆಚುಕ್ಕಿ ರೋಗ ಹೆಚ್ಚಾಗಿದೆ. ಅದನ್ನು ಇಂದಿಗೂ ನಿಯಂತ್ರಣ ಮಾಡೋದಕ್ಕೆ ಸಾಧ್ಯವಾಗಿಲ್ಲ. ಎಲೆ ಚುಕ್ಕಿ ರೋಗದಿಂದ ರೈತರ ಬೆಳೆಗಳು ಹಾಳಾಗಿ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆದು, ಪರಿಹಾರ ಕಂಡುಕೊಳ್ಳುವಂತ ಪ್ರಯತ್ನವಾಗಬೇಕು ಎಂದರು.
ಅಡಿಕೆಗೆ ಮಳೆ ಹೆಚ್ಚಾದ ಕಾರಣದಿಂದ ಕೊಳೆರೋಗ ಜಾಸ್ತಿಯಾಗಿದೆ. ಮರದಲ್ಲಿರಬೇಕಾಗಿದ್ದಂತ ಅಡಿಕೆ ನೆಲದಲ್ಲಿ ಸುರಿದು ಹಾಳಾಗುತ್ತಿದೆ. ಇದಕ್ಕೆ ಆಧುನಿಕ ತಂತ್ರಜ್ಞಾನದ ಮೂಲಕ ನಿಯಂತ್ರಿಸುವಂತೆ ಆಗಬೇಕು. ಅದಕ್ಕೆ ಔಷಧಿ ಕಂಡು ಹಿಡಿಯುವ ಕೆಲಸ ಆಗಬೇಕು. ಸ್ಥಳೀಯ ಸಂಶೋಧಕರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧಕರನ್ನು ಒಳಗೊಂಡು ತ್ವರಿತವಾಗಿ ಔಷದೋಪಚಾರ ಕಂಡು ಹಿಡಿಯುವಂತೆ ಆಗಬೇಕು ಎಂದರು.
ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಸುಚಿತ್ರ ಕುಮಾರಿಗೆ, ಅತ್ಯುತ್ತಮ ಸಂಶೋಧನಾ ಪ್ರಶಸ್ತಿಯನ್ನು ಡಾ.ಹರೀಶ್ ಬಾಬುಗೆ, ಅತ್ಯುತ್ತಮ ವಿಸ್ತರಣಾಧಿಕಾರಿ ಪ್ರಶಸ್ತಿಯನ್ನು ಕೃಷ್ಣಮೂರ್ತಿ ಎಟಿ ಅವರಿಗೆ, ಅತ್ಯುತ್ತಮ ಸೇವಾ ದರ್ಜೆ ಎ ಪ್ರಶಸ್ತಿಯನ್ನು ಮಹೇಶ್, ಸಿ ದರ್ಜೆಯ ಪ್ರಶಸ್ತಿಯನ್ನು ಸೀತಾರಾಮ್, ಡಿ ದರ್ಜೆಯ ಪ್ರಶಸ್ತಿಯನ್ನು ವನಜಾಕ್ಷಿಗೆ ಪ್ರದಾನ ಮಾಡಲಾಯಿತು.
ಇದಲ್ಲದೇ ಬಾಹ್ಯ ಅನುದಾನಿತ ಯೋಜನೆಗಳನ್ನು ಪಡೆದ ಡಾ.ಶ್ರೀದೇವಿ ಚಕ್ರಾಳ್, ಡಾ.ನಂದಿನಿ, ಡಾ.ವಿನಯ್ ಕುಮಾರ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನಿಸಲಾಯಿತು.
ಅಧ್ಯಕ್ಷೀಯ ನುಡಿಯಾಡಿದಂತ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿವಿಯ ಡಾ.ಆರ್.ಸಿ ಜಗದೀಶ್ ಅವರು, ಮೊದಲು 7 ಜಿಲ್ಲೆಗಳನ್ನು ವಿವಿ ಒಳಗೊಂಡಿತ್ತು. ಮಡಿಕೇರಿ ಪ್ರತ್ಯೇಕವಾದ ನಂತ್ರ ಈಗ ಆರು ಜಿಲ್ಲೆಗಳನ್ನು ಒಳಗೊಂಡು ವಿವಿ ರಚನೆಯಾಗಿದೆ. ನಮ್ಮ ವಿವಿ ಸಂಶೋಧನೆಯಲ್ಲಿ ವಿಶಿಷ್ಟ ಕೊಡುಗೆಯನ್ನು ನೀಡುವ ಮೂಲಕ 13ನೇ ವಸಂತಕ್ಕೆ ಕಾಲಿಟ್ಟಿದೆ ಎಂದರು.
ವಿವಿಯ ಶೈಕ್ಷಣಿಕ ಪ್ರಗತಿಯನ್ನು ಓದಿದಂತ ಅವರು, ಶೈಕ್ಷಣಿಕ ಪ್ರಗತಿಗಾಗಿ 16 ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಈವರೆಗೆ ಒಟ್ಟು 4,231 ವಿದ್ಯಾರ್ಥಿಗಳು ವಿವಿಯಿಂದ ಪದವಿಯನ್ನು ಪಡೆದಿದ್ದಾರೆ. ಆಸಾಧಾರಣ ಪ್ರಗತಿಯನ್ನು ಸಾಧಿಸಿರುವಂತ ವಿವಿಯು 331 ಚಿನ್ನದ ಪದಕವನ್ನು ನೀಡಲಾಗಿದೆ. 197 ವಿದ್ಯಾರ್ಥಿಗಳು ಟಿಸಿಆರ್ ಜೆಆರ್ ಎಫ್ ಪಡೆದಿದ್ದರೇ, 39 ಟಿಸಿಆರ್ ಎಸ್ ಆರ್ ಎಫ್ ಪಡೆದಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ನಮ್ಮ ವಿವಿಯ ಪ್ರಾಧ್ಯಾಪಕರು, ಸಂಶೋಧಕರು ನೆದರ್ ಲ್ಯಾಂಡ್, ಫಿನ್ ಲ್ಯಾಂಡಿಗೂ ಭೇಟಿ ನೀಡಿ ಕೃಷಿಯ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈವರೆಗೆ 20 ಹೊಸ ತಳಿಗಳನ್ನು ಕಂಡು ಹಿಡಿಯಲಾಗಿದೆ. ಸಹ್ಯಾದ್ರಿ ಭತ್ರವನ್ನು ಸಂಶೋಧಿಸಲಾಗಿದೆ. ಕೆ ಹೆಚ್ ಬಿ 11 ಭತ್ತದ ತಳಿ ಬಿಡುಗಡೆ ಮಾಡಲಾಗಿದೆ. 10 ಸಾವಿರ ಕಿಲೋ ಗ್ರಾಂ ಜೇನು ತುಪ್ಪವನ್ನು ಜೇನು ಕೃಷಿಯ ಮೂಲಕ ಸಂಗ್ರಹಿಸಲಾಗಿದೆ. 319 ನೂತನ ರಾಸಾಯನಿಕ ತಳಿ ಪರೀಕ್ಷೆ ನಡೆಸಲಾಗಿದೆ. 187 ಕ್ಷೇತ್ರ ಪ್ರಯೋಗ ನಡೆಸಲಾಗಿದೆ. ಪ್ರತಿ ವರ್ಷ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.
ಈವರೆಗೆ 14 ಸಾವಿರ ಬಾನುಲಿ ಕಾರ್ಯಕ್ರಮ ನೀಡಿದ್ದೇವೆ. ರೈತರಿಗೆ ಕೃಷಿಯ ಪ್ರಗತಿಯ ಮಾತಿಯನ್ನು ಹಂಚಿಕೊಂಡಿದ್ದೇವೆ. ಭಾರತ ಸರ್ಕಾರದ ವಿಕಸಿತ ಕೃಷಿ ಕಾರ್ಯಕ್ರಮವನ್ನು ಮಾಡಿದ್ದೇವೆ. ಈವರೆಗೆ ವಿವಿಗೆ ಅನೇಕ ಪ್ರಶಸ್ತಿಗಳು ಬಂದಿವೆ ಎಂದರು.
ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದಂತ ಡಾ.ಟಿಎಸ್ ಹೂವಯ್ಯ ಗೌಡ ಸಂಸ್ಥಾಪನಾ ದಿನದ ಪ್ರಯುಕ್ತ ಉಪನ್ಯಾಸ ನೀಡಿದರು. ಬೆಂಗಳೂರಿನ ಕೃಷಿ ಉದ್ದಿಮೆದಾರ ಡಾ.ಬಿಕೆ ಕುಮಾರಸ್ವಾಮಿ, ಮಡಿಕೇರಿಯ ಪ್ರಗತಿಪರ ರೈತ ಜೆಜಿ ಕಾವೇರಿಯಪ್ಪ, ಶಿವಮೊಗ್ಗದ ಪ್ರಗತಿಪರ ರೈತ ಹೆಚ್ ಡಿ ದೇವಿಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಅಧಿಕಾರಿಗಳು, ಶಿಕ್ಷಕರು, ನೌಕರರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಸಾಗರೀಕ ಪ್ರಾರ್ಥಿಸಿದರೇ, ಇರುವಕ್ಕಿ ಕೃಷಿ ವಿವಿಯ ಕುಲಸಚಿವ ಡಾ.ಜಿ.ಕೆ ಗಿರಿಜೇಶ್ 13ನೇ ಸಂಸ್ಥಾಪನಾ ದಿನಾಚರಣೆಗೆ ಆಗಮಿಸಿದ್ದಂತ ಗಣ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ರೈತ ತರಬೇತಿ ಕೇಂದ್ರದ ಮುಖ್ಯಸ್ಥ, ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಗಡೆ ಅವರು ವಂದಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಉತ್ತರ ಕನ್ನಡದಲ್ಲಿ ಘೋರ ದುರಂತ: ಮನೆಯಲ್ಲಿ LPG ಸಿಲಿಂಡರ್ ಸ್ಪೋಟದಿಂದ ಯುವತಿ ಸಾವು