ಮೈಸೂರು : ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 720 ಕ್ರೀಡಾಪಟುಗಳಂತೆ 5 ವಿಭಾಗಗಳಿಂದ ಒಟ್ಟು 3600 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಕೋರಿದ ಮುಖ್ಯಮಂತ್ರಿಗಳು, ಸೋಲುಗೆಲುವುಗಳಿಗಿಂತ, ಕ್ರೀಡಾಮನೋಭಾವ ಮುಖ್ಯ. ಇಂದು ಚಾಮುಂಡಿವಿಹಾರ ಕ್ರೀಡಾಂಗಣದ ಗ್ಯಾಲರಿ ಹಾಗೂ ಈಜುಕೊಳಗಳಿಗೆ ಅತ್ಯಾಧುನಿಕ ಟೆನ್ಸೈಲ್ ಮೆಂಬ್ರೇನ್ ಛಾವಣಿ ಅಳವಡಿಸುವ ಮತ್ತು ಫುಟ್ಬಾಲ್ ಅಂಕಣ ನಿರ್ಮಿಸುವ ಕಾಮಗಾರಿಯನ್ನು ರೂ. 20.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ವಿನೇಶ್ ಫೋಗಟ್ ಅವರು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು
ಸಮಾರಂಭದಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಮಹಿಳಾ ಕುಸ್ತಿಪಟು ಶ್ರೀಮತಿ ವಿನೇಶ್ ಫೋಗಟ್ ಭಾಗವಹಿಸಿರುವುದು ವಿಶೇಷ. ಕುಸ್ತಿ ಕೇವಲ ಪುರುಷರ ಕ್ರೀಡೆ ಎಂದು ಪರಿಗಣಿಸಲಾಗಿದ್ದ ಕಾಲದಲ್ಲಿ ಸಾಮಾಜಿಕ ಅಡೆತಡೆಗಳು ಮತ್ತು ಹಿನ್ನಡೆಗಳನ್ನು ಅನುಭವಿಸಿದರೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿದ್ದಾರೆ. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ಭಾರತದ ಕೀರ್ತಿ ಮೆರೆದ ವಿನೇಶ್ ಅವರು ಹರಿಯಾಣ ರಾಜ್ಯದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕ್ರೀಡಾಪಟುಗಳಿಗೆ ಸರ್ಕಾರದ ನೆರವು
ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದೆ. ಮುಂದಿನ ಒಲಿಂಪಿಕ್ಸ್ಗೆ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10.00 ಲಕ್ಷ ಸಹಾಯಧನ ನೀಡಿ ತರಬೇತಿ ನೀಡಲಾಗುವುದು. ಅಲ್ಲದೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವಿಜೇತ ಕ್ರೀಡಾಪಟುಗಳಿಗೆ ಸರ್ಕಾರ 6 ಕೋಟಿ ರೂ.ಗಳ ನಗದು ಬಹುಮಾನವನ್ನೂ ನೀಡಲಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಒದಗಿಸಲು ಎಲ್ಲ ಇಲಾಖೆಗಳಲ್ಲಿ ಶೇ.2 ರಷ್ಟು ಮೀಸಲಾತಿಯನ್ನೂ, ಹಾಗೂ ಪೊಲೀಸ್ ಇಲಾಖೆಯಲ್ಲಿ 2 ರಿಂದ ಶೇ.3 ರಷ್ಟು ಕ್ರೀಡಾಮೀಸಲಾತಿಯನ್ನು ನೀಡಲಾಗುತ್ತಿದೆ ಎಂದರು.
ಸದೃಢ ಆರೋಗ್ಯಕ್ಕೆ ಕ್ರೀಡೆ-ವ್ಯಾಯಾಮ
ಇಂದಿನ ಯುವಜನತೆ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚು ಒತ್ತು ನೀಡಿದರೆ ಅವರ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಸಹಕಾರಿಯಾಗಿದೆ. ಸದೃಢ ಆರೋಗ್ಯಕ್ಕೆ ಕ್ರೀಡೆ ಹಾಗೂ ವ್ಯಾಯಾಮ ಅತ್ಯಗತ್ಯ ಎಂದರು.
ನಾಳೆ ಈ ಕೋರ್ಸುಗಳಿಗೆ 3ನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟ: ಕೆಇಎ
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ