ಬೆಂಗಳೂರು: ರಾಜ್ಯದ ಆರೋಗ್ಯಇ ಇಲಾಖೆಯಲ್ಲಿ ವರ್ಗಾವಣೆಗಳ ಕುರಿತು ರೋಸಿಹೋದ ಇಲಾಖೆಯ ನೌಕರರು, ಸಿಡಿದೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಮೂಲಕ ನೌಕರರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ. ಮುಖ್ಯವಾಗಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ವಿರುದ್ಧವೇ ನೇರ ಆರೋಪ ಮಾಡಿದ್ದು, ಅವೈಜ್ಞಾನಿಕ ರೀತಿಯಲ್ಲಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ.
ಶಿಕ್ಷಣ ಇಲಾಖೆ ಬಳಿಕ ವೃಂದ ಬಲದಲ್ಲಿ ಆರೋಗ್ಯ ಇಲಾಖೆ ದೊಡ್ಡದು. ಇಂತಹ ಆರೋಗ್ಯ ಇಲಾಖೆಯಲ್ಲಿ ದಿನಕ್ಕೊಂದು ವರ್ಗಾವಣೆ ಆದೇಶ ಹೊರಡಿಸುತ್ತಾ, ಸರ್ಕಾರದ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಸ್ಥಿತಿ ನಿರ್ಮಾಣ ಮಾಡಲಾಗಿದೆ. ವೈದ್ಯಕೀಯ ಪರಿಣಿತರ ಅಭಿಪ್ರಾಯ ಪಡೆಯದೆ, ವೈದ್ಯಾಧಿಕಾರಿಗಳ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಗ್ರೇಟರ್ ಬೆಂಗಳೂರು ಮತ್ತು ಜೋನ್ ಎ ನಿಯಮವನ್ನು ಅಳವಡಿಸಿಕೊಂಡು, ಸಾಮೂಹಿಕ ವರ್ಗಾವಣೆ ನೆಪದಲ್ಲಿ ಕ್ರಿಟಿಕಲ್ ಮತ್ತು ನಾನ್ ಕ್ರಿಟಿಕಲ್ ಎಂಬ ವರ್ಗಾವಣೆ ಸ್ಥಳಗಳನ್ನಾಗಿ ಮಾರ್ಪಡಿಸಿಕೊಂಡು ಮನಸೋ ಇಚ್ಛೆ ವರ್ಗಾಯಿಸಲಾಗಿದೆ ಆಪಾದಿಸಲಾಗಿದೆ.
ಕೆಲ ವೈದ್ಯರು ಮತ್ತು ಸಿಬ್ಬಂದಿಯನ್ನು ಸುಮೋಟೊ ಟ್ರಾನ್ಸ್‌ಫರ್ ನೆಪದಲ್ಲಿ ಏಕಪಕ್ಷೀಯವಾಗಿ ಕೌನ್ಸೆಲಿಂಗ್ ಪದಕ್ಕೆ ಧಕ್ಕೆ ಬರುವ ರೀತಿ ವರ್ಗಾಯಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ನೀತಿ ನಿಯಮದಡಿ ಮಂಜೂರಾದ ಹುದ್ದೆಗಳನ್ನು ಸಾರ್ವಜನಿಕರ ಆರೋಗ್ಯ ಸೇವೆಗೆ ಅಗತ್ಯ ಇರುವ ಹುದ್ದೆಗಳನ್ನು ರದ್ದು ಮಾಡಲು ಆದೇಶ ಹೊರಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.