ಬೆಂಗಳೂರು : ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದು ಇದ್ದು, ಕೆಎಂಎಫ್ ಗ್ರಾಹಕರಿಗೆ GST ಪರಿಷ್ಕರಣೆಯಾದ ಬೆನ್ನಲ್ಲೇ ಸೋಮವಾರದಿಂದಲೇ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕೇಂದ್ರ ಸರ್ಕಾರ GST ತೆರಿಗೆಯಲ್ಲಿ ಶೇ. 5 ರಷ್ಟು ಇಳಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಕೆಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.
ತುಪ್ಪ, ಬೆಣ್ಣೆ, ಮೊಸರು ಸೇರಿ ನಂದಿನಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರದಲ್ಲಿ ಗಣನೀಯ ಇಳಿಕೆ ಮಾಡಿರುವುದರಿಂದ ಸೋಮವಾರದಿಂದ ಮಾರಾಟ ಬೆಲೆಯೂ ಇಳಿಕೆ ಆಗಲಿದೆ. ಆದರೆ, ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಂಎಫ್ ತಿಳಿಸಿದೆ. ಜಿಎಸ್‌ಟಿ ತೆರಿಗೆ ತಗ್ಗಿರುವುದರಿಂದ ಉತ್ಪಾದನಾ ವೆಚ್ಚದ ಜತೆ ಮತ್ತೊಮ್ಮೆ ಪರಾಮರ್ಶಿಸಿ ಹೊಸ ದರ ಪ್ರಕಟಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ.
ನಂದಿನಿ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಪನ್ನಿರ್ ಮತ್ತು ಗುಡ್ ಲೈಫ್ ಹಾಲಿಗೆ ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.