ಹಾಸನ: ಹಾಸನದಲ್ಲಿ ಘೋರ ಘಟನೆ ಒಂದು ನಡೆದಿದ್ದು, ಪಾರ್ಕ್ ನಲ್ಲಿ ಸ್ನೇಹಿತೆಯರ ಜೊತೆಗೆ ಕೈ ಹಿಡಿದುಕೊಂಡು ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹರಿಬಿಟ್ಟಿದ್ದಕ್ಕಾಗಿ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ತಾಲೂಕಿನ, ಕಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೊಸಳೆಹೊಸಳ್ಳಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಪವನ್.ಕೆ (21) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಸೆ. 17ರಂದು ಮಧ್ಯಾಹ್ನ ಹಾಸನದ ಮಹಾರಾಜ ಪಾರ್ಕ್‌ನಲ್ಲಿ ಪವನ್, ಇಬ್ಬರು ಸ್ನೇಹಿತೆಯರ ಜೊತೆ ಕುಳಿತಿದ್ದ. ಈ ವೇಳೆ ಓರ್ವ ಯುವತಿಯ ಕೈ ಹಿಡಿದು ಪವನ್ ಆತ್ಮೀಯತೆಯಿಂದ ಮಾತನಾಡುತ್ತಿದ್ದ. ಈ ದೃಶ್ಯವನ್ನು ಅಪರಿಚಿತ ಯುವತಿಯೊಬ್ಬಳು ಮೊಬೈಲ್‌ನಲ್ಲಿ ಸೆರೆ ಹಿಡಿದು, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಳು.
ಈ ಬಗ್ಗೆ ಯುವತಿಯು ಸಾಕಷ್ಟು ಟೀಕೆ ಜೊತೆಗೆ ವ್ಯಂಗ್ಯ ಸಂಭಾಷಣೆ ಮಾಡಿ ವೀಡಿಯೋ ಅಪ್‌ಲೋಡ್ ಮಾಡಿದ್ದಳು. ಈ ವೀಡಿಯೋವನ್ನು ಪವನ್ ಸಹಪಾಠಿಗಳು ಸೇರಿದಂತೆ ಅನೇಕರು ವೀಕ್ಷಣೆ ಮಾಡಿದ್ದರು. ಇದರಿಂದ ನನ್ನೊಂದಿಗಿದ್ದ ಯುವತಿಯರಿಗೆ ಏನಾದರೂ ತೊಂದರೆ ಆಗಲಿದೆ ಎಂದು ಭಾವಿಸಿ ಇನ್ಸ್ಟಾದಿಂದ ವೀಡಿಯೋ ಡಿಲೀಟ್ ಮಾಡಿಸಲು ಪವನ್ ಸಾಕಷ್ಟು ಪ್ರಯತ್ನ ಪಟ್ಟಿದ್ದ. ಆದರೆ ಅದು ಸಾಧ್ಯವಾಗದೇ ಇದ್ದಾಗ, ಗುರುವಾರ ಕಾಲೇಜು ಮುಗಿಸಿ ಮನೆಗೆ ಹೋಗಿದ್ದ ಪವನ್, ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.