ಬೆಂಗಳೂರು : ರಾಜ್ಯದ್ಯಾಂತ ಅರಣ್ಯ ಭೂಮಿ ಒತ್ತುವರಿ ಪತ್ತೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡಗಳನ್ನು (SIT) ರಚಿಸಿ ಆದೇಶ ಹೊರಡಿಸಿದೆ.
ಹೌದು, ಕಂದಾಯ ಇಲಾಖೆಯ ಸ್ವಾಧೀನದಲ್ಲಿದ್ದ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ, ಅಂತಹ ಭೂಮಿಯನ್ನು ಮರುವಶಕ್ಕೆ ಪಡೆಯಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಎಸ್ ಐಟಿ ರಚಿಸಿ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ನೀಡಿದ ನಿರ್ದೇಶನದ ಬೆನ್ನಲ್ಲೇ ಅರಣ್ಯ ಇಲಾಖೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಎಸ್ಐಟಿ ರಚಿಸಿದೆ. ನಾಲ್ಕು ತಿಂಗಳಲ್ಲಿ ಈ ಕುರಿತ ವರದಿ ನೀಡಬೇಕೆಂದು ಜಿಲ್ಲಾ ಎಸ್ಐಟಿಗೆ ನಿರ್ದೇಶಿಸಲಾಗಿದೆ. ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಇಲ್ಲವೇ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಲಾಗಿದೆಯೇ ಎನ್ನುವುದನ್ನು ವಿಶೇಷ ತನಿಖಾ ತಂಡಗಳು ಪತ್ತೆ ಮಾಡಬೇಕು. ಹೀಗೆ ಹಂಚಿಕೆ ಮಾಡಿದ ಭೂಮಿಯನ್ನು ರಾಜ್ಯ ಸರ್ಕಾರವು ವಾಪಸ್ ಪಡೆದು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ಕಾರಣದಿಂದಾಗಿ ಎಸ್ಐಟಿಗಳನ್ನು ರಚಿಸಲಾಗಿದೆ ಎಂದು ಆದೇಶ ಉಲ್ಲೇಖಿಸಿದೆ.